ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ರೈತರು ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಒಕ್ಕೂಟ ಮತ್ತು ಸಂಘದ ಆರ್ಥಿಕ ಸದೃಢತೆಗೆ ನೆರವಾಗಬೇಕು ಎಂದು ಮನ್ಮುಲ್ ನಿರ್ದೇಶಕಿ ಎಂ.ರೂಪ ಬುಧವಾರ ಹೇಳಿದರು.ಪಟ್ಟಣದ ಚನ್ನೇಗೌಡನದೊಡ್ಡಿ ಡೇರಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಮೂಲಕ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಿದ ಉತ್ಪಾದಕರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಗೆ ಏಕೈಕ ಹಾಲು ಒಕ್ಕೂಟವೆಂದು ಹೆಗ್ಗಳಿಕೆಗೆ ಪಾತ್ರವಾದ ಒಕ್ಕೂಟ ಪ್ರತಿನಿತ್ಯ 11 ಲಕ್ಷ ಲೀಟರ್ ಹಾಲು ಸಂಗ್ರಹಣೆ ಮಾಡುತ್ತಿದೆ. ಇದರಲ್ಲಿ 5 ಲಕ್ಷ ಲೀಟರ್ ಹಾಲು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಉಳಿದ ಹಾಲನ್ನು ನಂದಿನಿ ತುಪ್ಪ, ಹಾಲಿನ ಪುಡಿ ಸೇರಿದಂತೆ ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ ಎಂದು ತಿಳಿಸಿದರು.ಪ್ರಸ್ತುತ ಒಕ್ಕೂಟದಿಂದ ದೆಹಲಿ ಮಾರುಕಟ್ಟೆಯಲ್ಲಿ ಹಾಲು ಮಾರಾಟ ಮಾಡುವ ಅವಕಾಶ ದೊರಕಿದೆ. ಇದರಿಂದ ಅಲ್ಲಿನ ಮಾರುಕಟ್ಟೆಯಲ್ಲಿ ಹಾಲಿನ ಮಾರಾಟವನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಾದರೆ ಹಾಲಿನ ಗುಣಮಟ್ಟ ಅತ್ಯಗತ್ಯವಾಗಿದೆ ಎಂದರು.
ಪ್ರಸ್ತುತ ಒಕ್ಕೂಟ ಪ್ರತಿ ಲೀಟರ್ ಹಾಲಿನ ಖರೀದಿ ದರವನ್ನು 70 ಪೈಸೆ ಕಡಿತ ಮಾಡಿರುವುದು ಹಾಲು ಉತ್ಪಾದಕರಿಗೆ ಬೇಸರ ಮೂಡಿಸಿದೆ. ದರ ಕಡಿತ ಕೇವಲ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಖರೀದಿ ದರವನ್ನು ಹೆಚ್ಚಳ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.ದೆಹಲಿ ಮಾರುಕಟ್ಟೆಯಿಂದ ಒಕ್ಕೂಟಕ್ಕೆ ಬರುವ ಆದಾಯದಲ್ಲಿ ರೈತರಿಗೆ ದರ ಹೆಚ್ಚಳದ ಮೂಲಕ ಅಥವಾ ಇನ್ಯಾವುದೇ ಹೊಸ ಯೋಜನೆಗಳ ಹಾಲು ಉತ್ಪಾದಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ಒಕ್ಕೂಟ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಸಂಘದ ರಾಸು ಅಭಿವೃದ್ಧಿ ನಿಧಿಯಿಂದ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟ ಹಸುಗಳ ಮಾಲೀಕರಿಗೆ ಅಂತ್ಯಕ್ರಿಯೆಗೆ ನೆರವಾಗುವಂತೆ 2500 ರು. ಆರ್ಥಿಕ ನೆರವು ನೀಡುವ ಜೊತೆಗೆ ಒಕ್ಕೂಟ ಭರಿಸುವ ರಾಸು ವಿಮೆ ಸೌಲಭ್ಯದಲ್ಲಿ ಶೇ.25ರಷ್ಟು ಹಣವನ್ನು ಸಂಘವೇ ಪಾವತಿಸುವ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಒಕ್ಕೂಟದ ವಿಸ್ತರಣಾಧಿಕಾರಿ ಅಪ್ ಶಾದ್ ಪಾಷಾ, ಸಂಘದ ಉಪಾಧ್ಯಕ್ಷ ಶಂಕರಾಚಾರಿ, ನಿರ್ದೇಶಕರಾದ ಸಿ.ಎಸ್. ಪ್ರಕಾಶ್, ಶಿವರಾಜು, ಚೆನ್ನಪ್ಪ, ರಾಜಣ್ಣ, ಶಿವಣ್ಣ, ಸಿ. ಕವಿತಾ ಜಯರಾಮ, ಜಯಲಕ್ಷ್ಮೀ, ರಾಜೇಶ್ವರಿ, ಎಸ್. ಕುಮಾರ್, ಸಿಇಒ ಸಿ .ನಾಗಣ್ಣ, ಸಿಬ್ಬಂದಿ ಜೀವನ್ ಗೌಡ ಹಾಗೂ ಯೋಗೇಶ್ ಗೌಡ ಇದ್ದರು.