ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ

| Published : May 17 2025, 01:32 AM IST

ಸಾರಾಂಶ

ರೈತ ನಾಯಕರು ಹಾಗೂ ವಿಪಕ್ಷ ನಾಯಕರು ಪ್ರತಿಭಟನಾ ಸಭೆ ನಡೆಸಿದ ತರುವಾಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರರಾಜ್ಯ ಸರ್ಕಾರ ಬಿಡದಿ ಟೌನ್‌ಶಿಪ್‌ಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಭೂ ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ಬಿಡದಿ ಹೋಬಳಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಹಸ್ರಾರು ರೈತರು ಟ್ರ್ಯಾಕ್ಟರ್ ಹಾಗೂ ಖಾಸಗಿ ಬಸ್ಸುಗಳಲ್ಲಿ ಹೊರಟು ಬಸವನಪುರ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ಬಳಿಗೆ ಆಗಮಿಸಿ ಜಮಾಯಿಸಿದರು.ಹಸಿರು ಶಾಲು ಧರಿಸಿದ್ದ ರೈತರ ಸೈನ್ಯ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ "ಜೀವ ಕೊಟ್ಟೆವು ಭೂಮಿ ಕೊಡಲ್ಲ, ಜಿಬಿಡಿ ಅಧಿಕಾರಿಗಳಿಗೆ ಧಿಕ್ಕಾರ, ರೈತರ ಅಳಲನ್ನು ಆಲಿಸದ ಬಾಲಕೃಷ್ಣಗೆ ಧಿಕ್ಕಾರ, ಭೂಗಳ್ಳ ನಟರಾಜ್‌ಗೆ ಧಿಕ್ಕಾರ, ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ... " ಎಂಬ ಭಿತ್ತಿ ಫಲಕಗಳನ್ನು ಹಿಡಿದು ಕಾಲ್ನಡಿಗೆಯಲ್ಲಿ ಸಾಗಿದರು.ಮೆರವಣಿಗೆ ಉದ್ದಕ್ಕೂ ರೈತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಶಾಸಕ ಬಾಲಕೃಷ್ಣ ಹಾಗೂ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ವಿರುದ್ಧ ಘೋಷಣೆ ಕೂಗಿದರು. ರೈತರು ವಡೇರಹಳ್ಳಿ ಬಳಿ ಆಗಮಿಸಿದಾಗ ರೈತಗೀತೆ ಮೊಳಗಿತು. ಈ ವೇಳೆ ರೈತರೆಲ್ಲರು ಹಸಿರು ಶಾಲು ತಿರುಗಿಸುತ್ತಾ ಹೆಜ್ಜೆ ಹಾಕಿದರು. ಪೂಜಾ ಕುಣಿತ , ಗಾರುಡಿ ಗೊಂಬೆ, ಬೃಹತ್ತಾಕಾರದ ರಂಗು ರಂಗಿನ ಗೊಂಬೆಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿಗೆ ಆಗಮಿಸುತ್ತಿದ್ದಂತೆ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧದ ಘೋಷಣೆಗಳು ಮೊಳಗಿದವು.ರೈತ ನಾಯಕರು ಹಾಗೂ ವಿಪಕ್ಷ ನಾಯಕರು ಪ್ರತಿಭಟನಾ ಸಭೆ ನಡೆಸಿದ ತರುವಾಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಭೂಸ್ವಾಧೀನಕ್ಕೆ ಗುರುತಿಸಿರುವ ಜಮೀನುಗಳನ್ನು ಕೈಬಿಡುವಂತೆ ಒತ್ತಾಯ ಮಾಡಿದರು.ಈ ಸಂದರ್ಭದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್, ಮಾಜಿ ಶಾಸಕ ಎ.ಮಂಜುನಾಥ್, ಸಂಘದ ಅಧ್ಯಕ್ಷ ಅರಳಾಳಸಂದ್ರ ಕೆ. ರಾಮಯ್ಯ, ಕರ್ನಾಟಕ ಪ್ರಾಂತ ರೈತಸಂಘ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ ಮತ್ತಿತರರು ಹಾಜರಿದ್ದರು.ಬಾಕ್ಸ್--------- ಮನವಿ ಪತ್ರದಲ್ಲಿ ಏನಿದೆ ?ಬಿಡದಿ ಹೋಬಳಿ ಬೈರಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೈರಮಂಗಲ, ಬನ್ನಿಗಿರಿ, ಮಂಡಲಹಳ್ಳಿ ಮತ್ತು ಕಂಚುಗಾರನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಸೇರಿದ ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲು, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು, ಕೆ.ಜಿ ಗೊಲ್ಲರಪಾಳ್ಯ ಹಾಗೂ ಹಾರೋಹಳ್ಳಿ ತಾಲೂಕು, ಹಾರೋಹಳ್ಳಿ ಹೋಬಳಿ, ವಡೇರಹಳ್ಳಿ ಗ್ರಾಮದ ಭಾಗಶಃ ಜಮೀನುಗಳು ಒಟ್ಟು 9 ಸಾವಿರದ 600 ಏಕರೆ ಭೂಮಿಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭೂ ಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತರ ತೀವ್ರ ವಿರೋಧ ಇದೆ.ಈ ಭಾಗದಲ್ಲಿ ಸುಮಾರು 10.00 ಲಕ್ಷಕ್ಕೂ ಹೆಚ್ಚು ಮರಗಿಡಗಳಿದ್ದು, ಅವುಗಳನ್ನು ಮಾರಣ ಹೋಮ ಮಾಡಲು ಮುಂದಾಗಿದ್ದಾರೆ. ಈ ಎರಡು ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಪೂರ್ವ ದಿಕ್ಕಿನಲ್ಲಿ ಸುವರ್ಣಮುಖಿ ನದಿಯು ಹರಿಯುತ್ತಿದ್ದು ಪಶ್ಚಿಮ ದಿಕ್ಕಿನಲ್ಲಿ ವೃಷಭಾವತಿ ನದಿ ಹರಿಯುವುದರಿಂದ ಈ ಭೂ ಪ್ರದೇಶವು ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಾಗಿದೆ. ಇಲ್ಲಿ ಸರಿಸುಮಾರು 3 ಸಾವಿರ ಎಕರೆ ಭೂಮಿಯಲ್ಲಿ ತೆಂಗು, 2000 ಎಕರೆ ಭೂಮಿಯಲ್ಲಿ ರೇಷ್ಮೆ, ಸುಮಾರು 500 ಎಕರೆ ಭೂಮಿಯಲ್ಲಿ ಮಾವು, ಸುಮಾರು 1000 ಏಕರೆ ಭೂಮಿಯಲ್ಲಿ ಬಾಳೆ, ಸಪೋಟ, ಅಡಿಕೆ, ಜೋಳ, ಹಾಗೂ ಇತರೆ ಎಲ್ಲಾ ಬಗೆಯ ತರಕಾರಿ ಬೆಳೆಗಳನ್ನು ಬೆಳೆದಿದ್ದು ಸುಮಾರು ಶೇ.90 ರಷ್ಟು ಭೂಮಿಯು ತೋಟಗಾರಿಕೆ ಬೆಳೆಗಳಿಂದ ಕೂಡಿದೆ. ಹೈನುಗಾರಿಕೆಗಾಗಿ ಸಾವಿರಾರು ಹಸುಗಳು ಇದ್ದು ಸುಮಾರು ತಿಂಗಳಿಗೆ 60 ಲಕ್ಷ ಲೀಟರ್ ಹಾಲನ್ನು ಕರ್ನಾಟಕ ಹಾಲು ಮಹಾಮಂಡಳಿಗೆ ಸರಬರಾಜಾಗುತ್ತಿದೆ. ಹಾಗಾಗಿ ಇಲ್ಲಿ ಸಣ್ಣ ರೈತರುಗಳು ಹೆಚ್ಚು ಇರುವುದರಿಂದ ವ್ಯವಸಾಯ ಮತ್ತು ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡರೆ ಕೂಲಿ ಕಾರ್ಮಿಕರು, ಹೈನುಗಾರರು ಬೀದಿ ಪಾಲಾಗುತ್ತಾರೆ, 9600 ಎಕರೆ ಜಮೀನಿನ ಪೈಕಿ 2800 ಎಕರೆಯಷ್ಟು ಸರ್ಕಾರಿ ಬಿ ಖರಾಬು (ಸರ್ಕಾರಿ ಗೋಮಾಳ) ಜಮೀನಿದೆ. ಇದರಲ್ಲಿ ಸುಮಾರು 1000 ಸಾವಿರ ಎಕರೆಯಷ್ಟು ಭೂಮಿಯಲ್ಲಿ ಬಡ ರೈತರು ತಾತ-ಮುತ್ತಾತನ ಕಾಲದಿಂದ ಕೃಷಿ ಚಟುವಟಿಕೆ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರೆಲ್ಲರ ಹೆಸರಿಗೆ ಯಾವುದೇ ಖಾತೆ, ಕಂದಾಯ ದಾಖಲಾತಿಗಳು ಆಗಿಲ್ಲ .ಇಂತಹ ಭೂಮಿಯನ್ನು ಭೂ ಸ್ವಾಧೀನಪಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಈ ಭಾಗದ ರೈತರು ಭೂ ಸ್ವಾಧೀನಕ್ಕೆ ಸಂಪೂರ್ಣವಾಗಿ ವಿರೋಧವಾಗಿದ್ದು , ನಮ್ಮ ಗ್ರಾಮಗಳನ್ನು ಮತ್ತು ಜಮೀನುಗಳನ್ನು ಭೂಸ್ವಾಧೀನದಿಂದ ಕೈ ಬಿಡಬೇಕು.ಪ್ರಾಧಿಕಾರ 2025ರ ಮಾರ್ಚ್ 12ರಂದು ಪ್ರಾಥಮಿಕ ಅಧಿ ಸೂಚನೆ ಹೊರಡಿಸಿ, ಮಾ.26ರಂದು ಪತ್ರಿಕಾ ಪ್ರಕಟಣೆ ಮುಖಾಂತರ ರೈತರ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲವಕಾಶ ನೀಡಿದೆ. ಅದರಂತೆ ಸುಮಾರು 2500 ಜನ ರೈತರುಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ ಪ್ರಾಧಿಕಾರವು ಈ ಆಕ್ಷೇಪಣೆಯನ್ನು ಪರಿಗಣಿಸದೆ ಭೂ ಸ್ವಾಧೀನಕ್ಕೆ ಮುಂದಾಗಿದೆ.ಭೂ ಸ್ವಾಧೀನದ ಬಗ್ಗೆ ರೈತರ ಬಳಿ ಚರ್ಚಿಸದೆ ವಿಶ್ವಾಸಕ್ಕೆ ತೆಗೆದುಕೊಳ್ಳದೆ. ಒಪ್ಪಿಗೆ ಪಡೆಯದೇ ಗ್ರಾಮಸಭೆಗಳನ್ನು ಮಾಡದೆ ರೈತರುಗಳ ಅಭಿಪ್ರಾಯವನ್ನು ಪಡೆಯದೆ ಭೂ ಸ್ವಾಧೀನಕ್ಕೆ ಮುಂದಾಗಿರುವುದು ರೈತರು ಖಂಡಿಸಿದ್ದಾರೆ.------- 16ಕೆಆರ್ ಎಂಎನ್ 1,2.ಜೆಪಿಜಿ1.ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ಬೃಹತ್ ಮೆರವಣಿಗೆ ನಡೆಸಿದರು.2.ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರೊಂದಿಗೆ ಸಂಸದ ಮಂಜುನಾಥ್, ಮಾಜಿ ಶಾಸಕ ಎ.ಮಂಜುನಾಥ್ ಮನವಿ ಸಲ್ಲಿಸಿದರು.