ಸಾರಾಂಶ
ಅಗ್ರೋ ಸೆಂಟರ್ ಮಾಲೀಕರು ತಮ್ಮಲ್ಲಿ ಮುಳ್ಳು ಸಜ್ಜೆ ನಿವಾರಣೆಗೆ ಕ್ರಿಮಿನಾಶಕ ಲಭ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದರು.
ಹಾವೇರಿ: ಮೆಕ್ಕೆಜೋಳ ಬೆಳೆಗೆ ಮಾರಕವಾಗಿರುವ ಮುಳ್ಳುಸಜ್ಜೆ ಕಳೆ ನಿವಾರಣೆಗಾಗಿ ಔಷಧ ನೀಡುವಂತೆ ಬುಧವಾರದಿಂದ ನಗರದ ಅಗ್ರೋ ಕೇಂದ್ರದ ಎದುರು ರೈತರು ಜಮಾಯಿಸಿರುವ ಘಟನೆ ನಡೆದಿದೆ.
ನಗರದ ಹಾನಗಲ್ಲ ರಸ್ತೆಯಲ್ಲಿರುವ ಶ್ರೀನಿವಾಸ ಅಗ್ರೋ ಸೆಂಟರ್ ಎದುರು ಬುಧವಾರ ಸಂಜೆಯೇ ನೂರಾರು ರೈತರು ಜಮಾಯಿಸಿದ್ದರು. ಗುರುವಾರ ಬೆಳಗ್ಗೆಯಿಂದ ಕಳೆನಾಶಕ ಔಷಧಕ್ಕಾಗಿ ಮತ್ತೆ ನೂರಾರು ರೈತರು ಜಮಾಯಿಸಿದ್ದರು. ಆದರೆ, ಅಗ್ರೋ ಸೆಂಟರ್ ಮಾಲೀಕರು ಅಂಗಡಿ ಬಾಗಿಲು ಮುಚ್ಚಿ ನಾಪತ್ತೆಯಾಗಿದ್ದರು.ಅಗ್ರೋ ಸೆಂಟರ್ ಮಾಲೀಕರು ತಮ್ಮಲ್ಲಿ ಮುಳ್ಳು ಸಜ್ಜೆ ನಿವಾರಣೆಗೆ ಕ್ರಿಮಿನಾಶಕ ಲಭ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದರು. ಇದನ್ನು ನೋಡಿ ಅನೇಕ ರೈತರು ಔಷಧ ಖರೀದಿಸಿ ಸಿಂಪಡಣೆ ಮಾಡಿದ್ದರು. ಇದರಿಂದ ಕಳೆ ನಿವಾರಣೆ ಕೂಡ ಆಗಿತ್ತು ಎಂಬ ಮಾಹಿತಿ ಪಡೆದ ಜಿಲ್ಲೆಯ ವಿವಿಧ ತಾಲೂಕು, ದಾವಣಗೆರೆ, ಹರಿಹರ ಮುಂತಾದ ಕಡೆಗಳಿಂದಲೂ ರೈತರು ಔಷಧಕ್ಕಾಗಿ ಮುಗಿಬಿದ್ದಿದ್ದರು. ಆದರೆ, ಅಂಗಡಿ ಬಾಗಿಲು ಮುಚ್ಚಿದ್ದರಿಂದ ರೈತರು ಆಕ್ರೋಶಗೊಂಡಿದ್ದು ತಕ್ಷಣ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮಾಡಿದರು.
ಸ್ಥಳಕ್ಕೆ ಕೃಷಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆದರು. ಅಲ್ಲದೇ ಔಷಧದ ಮಾದರಿ ಪಡೆದು ಇದನ್ನು ಸಿಂಪಡಿಸಿದರೆ ಮುಳ್ಳು ಸಜ್ಜೆ ನಿವಾರಣೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಲ್ಯಾಬ್‌ಗೆ ಕಳಿಸಿಕೊಟ್ಟರು. ರೈತರು ಆತುರ ಪಡದೇ ಪ್ರಮಾಣಿತ ಔಷಧಿ ಪಡೆಯುವಂತೆ ಮನವಿ ಮಾಡಿದರು. ಮಧ್ಯಾಹ್ನದವರೆಗೂ ಕಾದು ನಿಂತಿದ್ದ ರೈತರು ಕೊನೆಗೆ ವಾಪಸಾದರು.