ಮೆಣಸಿನಕಾಯಿ ಹೆಚ್ಚು ಆದಾಯ ತಂದುಕೊಡುವ ವಾಣಿಜ್ಯ ಬೆಳೆಯಾದರೂ, ಇದರಲ್ಲಿ ಅಪಾಯವೂ ಅಷ್ಟೇ ಇದೆ. ಮಾರುಕಟ್ಟೆ ದರದಲ್ಲಿ ತೀವ್ರ ಏರಿಳಿತವಾಗುವುದು ರೈತರ ಆತಂಕಕ್ಕೆ ಪ್ರಮುಖ ಕಾರಣ.
ಮಂಜುನಾಥ ಕೆ.ಎಂ.ಬಳ್ಳಾರಿ: ಒಂದು ಕಾಲದಲ್ಲಿ ರೈತರ ಕೈಹಿಡಿದಿದ್ದ ಒಣ ಮೆಣಸಿನಕಾಯಿ ಬೆಳೆ, ಬೆಲೆ ಏರಿಳಿತ ಹಾಗೂ ದುಬಾರಿ ಉತ್ಪಾದನಾ ವೆಚ್ಚದಿಂದಾಗಿ ಕಳೆದ ಕೆಲ ವರ್ಷಗಳಿಂದ ಅನ್ನದಾತರನ್ನು ಹೈರಾಣಾಗಿಸಿತ್ತು. ಪರಿಣಾಮ ಕಳೆದ ವರ್ಷ ಮೆಣಸಿನಕಾಯಿ ಬೆಳೆಯಿಂದ ಅಂತರ ಕಾಯ್ದುಕೊಂಡಿದ್ದ ಜಿಲ್ಲೆಯ ರೈತರು, ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಉತ್ತಮ ದರ ಕಂಡುಬಂದ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಮೆಣಸಿನಕಾಯಿಯತ್ತ ಮುಖ ಮಾಡಿದ್ದಾರೆ.ಇದಕ್ಕೆ ಸಾಕ್ಷಿಯೆಂಬಂತೆ ಕಳೆದ ವರ್ಷ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಮೆಣಸಿನಕಾಯಿ ಬೆಳೆ ಈ ಬಾರಿ 34 ಸಾವಿರ ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ. ಒಂದೇ ವರ್ಷದಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶ ಹೆಚ್ಚಳವಾಗಿದ್ದು, ಶೇ.17ರಷ್ಟು ವಿಸ್ತೀರ್ಣ ವೃದ್ಧಿಯಾಗಿದೆ. ಮಾರುಕಟ್ಟೆಯಲ್ಲಿನ ಉತ್ತಮ ದರದ ನಿರೀಕ್ಷೆಯೇ ರೈತರು ಮತ್ತೆ ಮೆಣಸಿನಕಾಯಿ ಬೆಳೆಯತ್ತ ಮರಳಲು ಪ್ರಮುಖ ಕಾರಣವಾಗಿದೆ.ಬೆಲೆ ಕುಸಿತದಿಂದ ಹಿಂದೆ ಸರಿದಿದ್ದರು: 2021-22 ಹಾಗೂ 2022-23ನೇ ಸಾಲಿನಲ್ಲಿ ಒಣ ಮೆಣಸಿನಕಾಯಿಗೆ ನಿರೀಕ್ಷಿತ ಬೆಲೆ ದೊರೆಯದಿರುವುದು ರೈತರ ಆರ್ಥಿಕ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ ಹಾಗೂ ನೀರಾವರಿ ಸೇರಿದಂತೆ ಉತ್ಪಾದನಾ ವೆಚ್ಚ ಏರಿಕೆಯಾಗಿದ್ದರೂ, ಕಟಾವು ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದೆ ಅನೇಕ ರೈತರು ನಷ್ಟ ಅನುಭವಿಸಿದ್ದರು.ಸಾಲ ಮಾಡಿ ಮೆಣಸಿನಕಾಯಿ ಬೆಳೆದ ರೈತರು ನಿರೀಕ್ಷಿತ ಆದಾಯ ಬಾರದೆ ಸಾಲ ತೀರಿಸಲಾಗದ ಸ್ಥಿತಿಗೂ ಸಿಲುಕಿದ್ದರು. ಹೀಗಾಗಿ ಹಲವು ರೈತರು ಮೆಣಸಿನಕಾಯಿಗೆ ಪರ್ಯಾಯ ಬೆಳೆಗಳತ್ತ ಮುಖ ಮಾಡಿದ್ದರು. ಇದರ ಪರಿಣಾಮ ಕಳೆದ ವರ್ಷ ಮೆಣಸಿನಕಾಯಿ ಬೆಳೆಯ ವಿಸ್ತೀರ್ಣ 29 ಸಾವಿರ ಹೆಕ್ಟೇರ್‌ಗೆ ಸೀಮಿತವಾಗಿತ್ತು.ಕಡಿಮೆ ಉತ್ಪಾದನೆ; ಹೆಚ್ಚಿದ ಬೇಡಿಕೆ: ಕಳೆದ ವರ್ಷ ಮೆಣಸಿನಕಾಯಿ ಬೆಳೆಯ ವಿಸ್ತೀರ್ಣ ಕಡಿಮೆಯಾದ ಪರಿಣಾಮ ಉತ್ಪಾದನೆಯಲ್ಲೂ ಇಳಿಕೆ ಕಂಡುಬಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಾಗಿತ್ತು. ಕಡಿಮೆ ಪ್ರಮಾಣದ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಬಂದ ಪರಿಣಾಮ ದರವೂ ಏರಿಕೆ ಕಂಡಿತ್ತು. ಮೆಣಸಿನಕಾಯಿ ಬೆಳೆದ ರೈತರಿಗೆ ಉತ್ತಮ ಆದಾಯ ಸಿಕ್ಕಿದ್ದು, ಉಳಿದ ರೈತರನ್ನೂ ಮತ್ತೆ ಈ ಬೆಳೆಯತ್ತ ಸೆಳೆದಿದೆ.ಲಾಭದಷ್ಟೇ ಅಪಾಯವೂ ಹೆಚ್ಚು!: ಮೆಣಸಿನಕಾಯಿ ಹೆಚ್ಚು ಆದಾಯ ತಂದುಕೊಡುವ ವಾಣಿಜ್ಯ ಬೆಳೆಯಾದರೂ, ಇದರಲ್ಲಿ ಅಪಾಯವೂ ಅಷ್ಟೇ ಇದೆ. ಮಾರುಕಟ್ಟೆ ದರದಲ್ಲಿ ತೀವ್ರ ಏರಿಳಿತವಾಗುವುದು ರೈತರ ಆತಂಕಕ್ಕೆ ಪ್ರಮುಖ ಕಾರಣ. ಒಂದು ವರ್ಷ ಉತ್ತಮ ಬೆಲೆ ಸಿಕ್ಕರೆ ಮರುವರ್ಷ ಹೆಚ್ಚಿನ ರೈತರು ಅದೇ ಬೆಳೆಯತ್ತ ಮುಖ ಮಾಡುತ್ತಾರೆ. ಉತ್ಪಾದನೆ ಹೆಚ್ಚಾದಾಗ ಮಾರುಕಟ್ಟೆಗೆ ಏಕಕಾಲಕ್ಕೆ ಹೆಚ್ಚಿನ ಪ್ರಮಾಣದ ಮೆಣಸಿನಕಾಯಿ ಆವಕವಾಗಿ ದರ ಕುಸಿಯುವ ಅಪಾಯವಿರುತ್ತದೆ.ಈ ಬಾರಿ ಹೆಚ್ಚುವರಿಯಾಗಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿರುವುದರಿಂದ ಉತ್ಪಾದನೆಯೂ ಹೆಚ್ಚುವ ನಿರೀಕ್ಷೆಯಿದೆ. ಹೀಗಾಗಿ ಕಟಾವು ವೇಳೆಗೆ ಮಾರುಕಟ್ಟೆಯಲ್ಲಿ ದರ ಯಾವ ಮಟ್ಟದಲ್ಲಿರಲಿದೆ ಎಂಬುದೇ ರೈತರ ಪಾಲಿಗೆ ನಿರ್ಣಾಯಕವಾಗಲಿದೆ.ಹವಾಮಾನದ್ದೂ ದೊಡ್ಡ ಸವಾಲು: ಮೆಣಸಿನಕಾಯಿ ಬೆಳೆಯಲ್ಲಿ ಮಳೆ, ತೇವಾಂಶ, ಕೀಟಬಾಧೆ ಹಾಗೂ ರೋಗಗಳ ನಿರ್ವಹಣೆ ಅತ್ಯಂತ ಮುಖ್ಯ. ಹವಾಮಾನದಲ್ಲಿ ಕೊಂಚ ವ್ಯತ್ಯಾಸವಾದರೂ ಇಳುವರಿ ಮೇಲೆ ನೇರ ಪರಿಣಾಮ ಬೀರುತ್ತದೆ. ಜತೆಗೆ ಬೀಜ, ಗೊಬ್ಬರ, ಔಷಧ, ಕೂಲಿ ಮತ್ತು ನೀರಾವರಿ ವೆಚ್ಚವೂ ಹೆಚ್ಚಿರುವುದರಿಂದ ಉತ್ತಮ ಇಳುವರಿಯ ಜತೆಗೆ ಸೂಕ್ತ ಮಾರುಕಟ್ಟೆ ದರ ದೊರೆತರೆ ಮಾತ್ರ ರೈತರಿಗೆ ನಿರೀಕ್ಷಿತ ಲಾಭ ಸಿಗಲಿದೆ.ದರ ಕುಸಿಯದಿರಲಿ: ಕಳೆದ ವರ್ಷದ ಉತ್ತಮ ದರವನ್ನೇ ನೆಚ್ಚಿಕೊಂಡು ಈ ಬಾರಿ ರೈತರು ಮೆಣಸಿನಕಾಯಿ ವಿಸ್ತರಿಸಿದ್ದಾರೆ. ಆದರೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಬಂದಾಗ ದರ ಕುಸಿದರೆ ಮತ್ತೆ ನಷ್ಟದ ಸುಳಿಗೆ ಸಿಲುಕುವ ಆತಂಕವೂ ಅವರನ್ನು ಕಾಡುತ್ತಿದೆ. ಹೀಗಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವುದು, ಸೂಕ್ತ ದರ ದೊರೆಯುವಂತೆ ಕ್ರಮ ಕೈಗೊಳ್ಳುವುದು ಹಾಗೂ ಅಗತ್ಯ ಮಾರುಕಟ್ಟೆ ಮಾಹಿತಿ ರೈತರಿಗೆ ಸಕಾಲಕ್ಕೆ ತಲುಪಿಸುವ ವ್ಯವಸ್ಥೆಯಾಗಬೇಕು ಎಂಬುದು ಬೆಳೆಗಾರರ ಒತ್ತಾಯವಾಗಿದೆ.ಕಳೆದ ವರ್ಷ ಕೈಹಿಡಿದ ದರದ ಮೇಲಿನ ನಂಬಿಕೆಯಿಂದ ರೈತರು ಮತ್ತೆ ಮೆಣಸಿನಕಾಯಿಯತ್ತ ಮರಳಿದ್ದಾರೆ. ಈಗ ಅವರ ಕಣ್ಣು ಕಟಾವು ನಂತರದ ಮಾರುಕಟ್ಟೆಯತ್ತ ನೆಟ್ಟಿದೆ. ಮೆಣಸಿನಕಾಯಿ ಈ ಬಾರಿ ರೈತರ ಬದುಕಿಗೆ ‘ಖಾರ’ ತರುವುದೋ, ಆದಾಯಕ್ಕೆ ‘ಸಿಹಿ’ ನೀಡುವುದೋ ಮಾರುಕಟ್ಟೆ ದರವೇ ನಿರ್ಧರಿಸಲಿದೆ.ಒಂದೇ ವರ್ಷದಲ್ಲಿ 5 ಸಾವಿರ ಹೆಕ್ಟೇರ್ ಹೆಚ್ಚಳಕಳೆದ ವರ್ಷ: 29,000 ಹೆಕ್ಟೇರ್ಈ ವರ್ಷ: 34,000 ಹೆಕ್ಟೇರ್ಹೆಚ್ಚಳ: 5,000 ಹೆಕ್ಟೇರ್ವಿಸ್ತೀರ್ಣ ವೃದ್ಧಿ: ಸುಮಾರು ಶೇ.17