ಕಸಬಾ ಹೋಬಳಿಯ ರೈತರು ಕಾಲುವೆ ನೀರನ್ನು ಬಳಸಿಕೊಂಡು ಭತ್ತ ಬೆಳೆದಿದ್ದರು. ಬೆಳೆ ಕೊಯ್ಲಿಗೆ ಬಂದಿದ್ದರಿಂದ ಕಟಾವು ಮಾಡಿ ಗದ್ದೆಯಲ್ಲೇ ಬಿಟ್ಟಿದ್ದರು. ಬೆಳಗ್ಗಿನ ಜಾವ ಅಕಾಲಿಕ ಮಳೆ ಸುರಿದ ಪರಿಣಾಮ ಗದ್ದೆಯಲ್ಲಿ ನೀರು ನಿಂತು ಬೆಳೆಯೆಲ್ಲಾ ನೀರು ಪಾಲಾಗಿದೆ.

ಎಚ್.ಎನ್. ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ಶುಕ್ರವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ನೂರಾರು ಎಕರೆಯಲ್ಲಿ ಕಟಾವು ಮಾಡಿ ಹಾಕಿದ್ದ ಭತ್ತದ ಬೆಳೆಗೆ ಹಾನಿಯಾಗಿದೆ. ಕೊಯ್ಲು ಮಾಡಲಾಗಿದ್ದ ಭತ್ತದ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ.

ಕಸಬಾ ಹೋಬಳಿಯ ರೈತರು ಕಾಲುವೆ ನೀರನ್ನು ಬಳಸಿಕೊಂಡು ಭತ್ತ ಬೆಳೆದಿದ್ದರು. ಬೆಳೆ ಕೊಯ್ಲಿಗೆ ಬಂದಿದ್ದರಿಂದ ಕಟಾವು ಮಾಡಿ ಗದ್ದೆಯಲ್ಲೇ ಬಿಟ್ಟಿದ್ದರು. ಬೆಳಗ್ಗಿನ ಜಾವ ಅಕಾಲಿಕ ಮಳೆ ಸುರಿದ ಪರಿಣಾಮ ಗದ್ದೆಯಲ್ಲಿ ನೀರು ನಿಂತು ಬೆಳೆಯೆಲ್ಲಾ ನೀರು ಪಾಲಾಗಿದೆ.

ಹೊಸ ವರ್ಷ ಆರಂಭದ ಶುಕ್ರವಾರ ಹಲವಾರು ರೈತರ ಪಾಲಿಗೆ ಕರಾಳ ಶುಕ್ರವಾರವಾಗಿದೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈ ಸೇರಿದ ಖುಷಿಯಲ್ಲಿದ್ದೆವು. ಇನ್ನೇನು ಬೆಳೆಯನ್ನು ಮನೆಗೆ ಸೇರಿಸಿಕೊಳ್ಳಬೇಕೆನ್ನುವಷ್ಟರಲ್ಲಿ ಮಳೆ ಬೆಳೆಯನ್ನೆಲ್ಲಾ ಹಾಳು ಮಾಡಿತು ಎಂದು ನೊಂದ ರೈತ ಎ.ಬಿ.ಚೇತನ್ ಕುಮಾರ್ ಅಳಲು ತೋಡಿಕೊಂಡರು.

ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಪ್ರಕೃತಿ ವಿಕೋಪಕ್ಕೆ ಒಳಗಾದ ಬೆಳೆಗೆ ಪರಿಹಾರ ಕೊಡಬೇಕು. ಈಗಾಗಲೇ ವ್ಯವಸಾಯದಿಂದ ನಷ್ಟ ಅನುಭವಿಸಿರುವ ರೈತರು ಅದರಿಂದ ವಿಮುಖರಾಗುತ್ತಿದ್ದಾರೆ. ಉಳಿದ ಅಲ್ಪ ಸ್ವಲ್ಪ ರೈತರು ವ್ಯವಸಾಯದಿಂದ ಹೀಗೆ ಪದೇ ಪದೇ ನಷ್ಟ ಅನುಭವಿಸಿದರೆ ಮಾಡಿದ ಸಾಲ ತೀರಿಸಲಾಗದೆ ವ್ಯವಸಾಯದಿಂದ ದೂರ ಉಳಿಯುವರು. ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋದರೆ ಅನ್ನದಾತನೇ ಅನ್ನಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಎದುರಾಗಲಿದೆ. ಆನಂತರ ಉಳಿದವರ ತುತ್ತಿನ ಚೀಲ ತುಂಬಿಸುವವರಾರು ಎಂಬುದು ರೈತರ ಪ್ರಶ್ನೆಯಾಗಿದೆ.