ಗದಗ: ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಆದರೆ, ನಗರದಲ್ಲಿ ಯೂರಿಯಾ ಗೊಬ್ಬರದ ತೀವ್ರ ಕೊರತೆ ಎದುರಾಗಿದ್ದು, ರೈತರು ಗೊಬ್ಬರಕ್ಕಾಗಿ ಪರದಾಡುವಂತಾಗಿದೆ.

ತಾಂತ್ರಿಕ ಸಮಸ್ಯೆ ಹಾಗೂ ಕೃತಕ ಅಭಾವದ ಶಂಕೆಯಿಂದಾಗಿ ಅನ್ನದಾತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತೋಟಗಾರಿಕಾ ಹಾಗೂ ಪ್ರಮುಖ ಬೆಳೆಗಳಿಗೆ ಈ ಸಮಯದಲ್ಲಿ ಯೂರಿಯಾ ಗೊಬ್ಬರ ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ನಗರದ ಶ್ರೀ ಎಂಟರ್‌ಪ್ರೈಸಸ್ ಅಂಗಡಿಯ ಮುಂದೆ ನೂರಾರು ರೈತರು ಗುರುವಾರ ಬೆಳಗಿನ ಜಾವ 5 ಗಂಟೆಯಿಂದಲೇ ಬಂದು ಸರದಿ ಸಾಲಿನಲ್ಲಿ ನಿಂತಿದ್ದು, ಮಧ್ಯಾಹ್ನ ದಾಟಿದರೂ ರೈತರಿಗೆ ಯೂರಿಯಾ ಮಾತ್ರ ಕೈಸೇರುತ್ತಿಲ್ಲ. ಗೊಬ್ಬರ ವಿತರಣೆಯ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷದ ನೆಪ ಹೇಳುತ್ತಾ ಅಧಿಕಾರಿಗಳು ಮತ್ತು ಅಂಗಡಿಗಳ ಮಾಲೀಕರು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ನಾವು ಮುಂಜಾನೆ ಐದು ಗಂಟೆಗೆ ಬಂದು ನಿಂತಿದ್ದೇವೆ. ಮಧ್ಯಾಹ್ನವಾದರೂ ಗೊಬ್ಬರ ಸಿಕ್ಕಿಲ್ಲ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಗಡೆ ಬರುತ್ತಿಲ್ಲ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ. ಮೊದಲು ಒಬ್ಬ ರೈತರಿಗೆ ಒಂದು ಚೀಲ ಮಾತ್ರ ನೀಡುತ್ತೇವೆ ಎಂದರು, ಈಗ ಅದನ್ನೂ ನೀಡುತ್ತಿಲ್ಲ, ವಿದ್ಯುತ್ ಸಮಸ್ಯೆಯಾಗಿದೆ ಎಂದು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕೃಷಿಕರು ಆರೋಪಿಸಿದರು.

ಒಂದೆಡೆ ಗೊಬ್ಬರ ಸಿಗದೆ ರೈತರು ಪರದಾಡುತ್ತಿದ್ದರೆ, ಮತ್ತೊಂದೆಡೆ ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವುದರಲ್ಲೇ ಬ್ಯುಸಿಯಾಗಿದ್ದಾರೆ. ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಯಾವುದೇ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿಲ್ಲ. ಇದು ಕೃತಕ ಅಭಾವ ಸೃಷ್ಟಿಸಿರುವ ಶಂಕೆಯನ್ನು ಮೂಡಿಸುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೈತ ಸಂಘಟನೆಗಳು ಹಾಗೂ ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.