ವಿದ್ಯಾರ್ಥಿಗಳು ಮಳೆಯ ನಡುವೆಯೇ ಕಾಲೇಜುಗಳಿಗೆ ತೆರಳಬೇಕಾಯಿತು. ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ವ್ಯಾಪಾರಿಗಳು ಮಳೆಯಿಂದಾಗಿ ಗ್ರಾಹಕರ ಕೊರತೆ ಎದುರಿಸುವಂತಾಯಿತು. ಆಯುಧ ಪೂಜೆ ಹತ್ತಿರ ಇರುವುದರಿಂದ ರಸ್ತೆ ಬದಿ ಬೂದಕುಂಬಳ ಕಾಯಿ ವ್ಯಾಪಾರದಲ್ಲಿ ತೊಡಗಿದವರಿಗೆ ಮಳೆ ವ್ಯಾಪಾರಕ್ಕೆ ತಡೆ ಮಾಡಿತು. ನಗರದ ವಿವಿಧ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಕೆರೆಯಂತಾಗಿತ್ತು. ವಾಹನಗಳು ಸಂಚರಿಸುವಾಗ ರಸ್ತೆಗಳಲ್ಲಿ ನಿಂತಿದ್ದ ನೀರು ಪಾದಚಾರಿಗಳ ಮೇಲೆ ಚಿಮ್ಮುತ್ತಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಅನೇಕರು ಕೊಡೆಗಳ ಆಶ್ರಯ ಪಡೆದು ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ಬಿಸಿಲಿನ ಬೇಗೆಯಲ್ಲಿದ್ದ ಜನರಿಗೆ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿದ ಪರಿಣಾಮ ಒಂದು ಕಡೆ ಸಂತಸವಾದರೆ ಮತ್ತೊಂದು ಕಡೆ ಜನಜೀವನ ಅಸ್ತವ್ಯಸ್ತಗೊಂಡಿತು. ಬೆಳಗಿನ ಜಾವದಿಂದ ಮಳೆಯ ಆರ್ಭಟ ಹೆಚ್ಚಾಗಿದ್ದರಿಂದ ಸಾರ್ವಜನಿಕರು ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಕೆಲಕಾಲ ತೊಂದರೆ ಅನುಭವಿಸಿದರು.

ಶಾಲೆಗಳಿಗೆ ರಜೆ ಇದ್ದುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗಲಿಲ್ಲ. ಆದರೆ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಳೆಯ ನಡುವೆಯೇ ಕಾಲೇಜುಗಳಿಗೆ ತೆರಳಬೇಕಾಯಿತು. ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ವ್ಯಾಪಾರಿಗಳು ಮಳೆಯಿಂದಾಗಿ ಗ್ರಾಹಕರ ಕೊರತೆ ಎದುರಿಸುವಂತಾಯಿತು. ಆಯುಧ ಪೂಜೆ ಹತ್ತಿರ ಇರುವುದರಿಂದ ರಸ್ತೆ ಬದಿ ಬೂದಕುಂಬಳ ಕಾಯಿ ವ್ಯಾಪಾರದಲ್ಲಿ ತೊಡಗಿದವರಿಗೆ ಮಳೆ ವ್ಯಾಪಾರಕ್ಕೆ ತಡೆ ಮಾಡಿತು. ನಗರದ ವಿವಿಧ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಕೆರೆಯಂತಾಗಿತ್ತು. ವಾಹನಗಳು ಸಂಚರಿಸುವಾಗ ರಸ್ತೆಗಳಲ್ಲಿ ನಿಂತಿದ್ದ ನೀರು ಪಾದಚಾರಿಗಳ ಮೇಲೆ ಚಿಮ್ಮುತ್ತಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಅನೇಕರು ಕೊಡೆಗಳ ಆಶ್ರಯ ಪಡೆದು ತಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿಸಿಕೊಂಡರು.

ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಹಲವು ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುರಿದ ಮಳೆ ಕೃಷಿ ಚಟುವಟಿಕೆಗಳಿಗೆ ಹಾಗೂ ಜಲಮೂಲಗಳ ಪುನರ್ಭರ್ತಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆ ಮೂಡಿಸಿದೆ. ಒಂದೆಡೆ ಧಾರಾಕಾರ ಮಳೆಯಿಂದ ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ತೊಂದರೆಯಾದರೂ, ಮತ್ತೊಂದೆಡೆ ನೀರಿನ ಕೊರತೆಯ ಆತಂಕ ಎದುರಿಸುತ್ತಿದ್ದ ಜನರಲ್ಲಿ ಮಳೆ ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯಾದರೆ ಕೆರೆಕಟ್ಟೆಗಳು ತುಂಬುವ ಜತೆಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.