ಸಾರಾಂಶ
ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ ಎದುರು ಸೋಮವಾರ ಯೂರಿಯಾ ಗೊಬ್ಬರ ಪಡೆಯಲು ರೈತರು ಮುಗಿಬಿದ್ದಿದ್ದರು.ನಿರಂತರ ಮಳೆಯಿಂದಾಗಿ ಬೆಳೆಗಳು ಕ್ಷೀಣಿಸುವ ಆತಂಕಕ್ಕೆ ಒಳಗಾಗಿದ್ದ ರೈತರು ಯೂರಿಯಾ ಗೊಬ್ಬರ ಪಡೆಯಲು ಸೊಸೈಟಿ ಎದುರು ಜಮಾವಣೆಯಾಗಿದ್ದರು. ಶನಿವಾರ 15 ಟನ್ ಹಾಗೂ ಭಾನುವಾರ ಸಂಜೆ 15 ಟನ್ ಸೇರಿ ಒಟ್ಟು 30 ಟನ್ ಯೂರಿಯಾ ಗೊಬ್ಬರ ಸರಬರಾಜು ಆಗಿತ್ತು. ಸೋಮವಾರ ಬೆಳಗ್ಗೆ ಯೂರಿಯಾ ಗೊಬ್ಬರ ಪೂರೈಕೆ ಮಾಡುವಾಗ ಗಲಾಟೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಪೊಲೀಸರ ಬಿಗಿ ಭದ್ರತೆಯಲ್ಲಿ ಗೊಬ್ಬರವನ್ನು ವಿತರಣೆ ಮಾಡಲಾಯಿತು. ಪ್ರತಿಯೊಬ್ಬ ರೈತರಿಗೆ 2 ಚೀಲಗಳನ್ನು ಮಾತ್ರ ವಿತರಿಸಲಾಯಿತು. ಮನೆಗೆ ಇಬ್ಬರು, ಮೂರು ಜನರು ಹೀಗೆ ರೈತರು ಸರದಿ ಸಾಲಿನಲ್ಲಿ ನಿಂತು 30 ಟನ್ ಗೊಬ್ಬರ ಮುಗಿಯುವವರೆಗೆ ಪಡೆದುಕೊಂಡರು. ಇನ್ನೂ ಪಾಳೆಯಲ್ಲಿದ್ದ ರೈತರು ಯೂರಿಯಾ ಸಿಗದಿದ್ದಕ್ಕೆ ಬೇಸತ್ತು, ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮೆಕ್ಕೆಜೋಳ, ಹತ್ತಿ, ಶೇಂಗಾ, ಸೋಯಾಬಿನ್ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳವಣಿಗೆ ಕ್ಷೀಣಿಸುತ್ತಿವೆ. ಅವುಗಳಿಗೆ ಮೇಲುಗೊಬ್ಬರ ಹಾಕಲು ಯೂರಿಯಾ ರಸಗೊಬ್ಬರದ ಅಗತ್ಯವಿದ್ದು, ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕ ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಸೊಸೈಟಿ ಆಡಳಿತ ಮಂಡಳಿಯವರು ಸಂಬಂಧಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇನ್ನೂ ಮೂರ‍್ನಾಲ್ಕು ದಿನ ತಡವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆಂದು ಸೊಸೈಟಿ ಸದಸ್ಯ ಪರಮೇಶಪ್ಪ ದೊಡ್ಡಜಾಲಿ ತಿಳಿಸಿದ್ದಾರೆ.