Farmers' inclination towards safflower cultivation after a decade
-ರೈತರ ಕೈಹಿಡಿದ ಕುಸುಬೆ
------ಮುಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿರುವ ರೈತರ ಕೈಹಿಡಿಯುವ ಭರವಸೆ ಮೂಡಿಸಿದ ಕುಸುಬೆ
-----ಬಿಂದುಮಾಧವ ಮಣ್ಣೂರ
ಕನ್ನಡಪ್ರಭ ವಾರ್ತೆ ಅಫಜಲಪುರಎರಡು ದಶಕದಿಂದ ಕಡೆಗಣನೆಯಾಗಿದ್ದ ಕುಸುಬೆ ಬೆಳೆಯತ್ತ ತಾಲೂಕಿನ ರೈತರು ಮತ್ತೆ ಒಲವು ತೋರಿದ್ದು, ತಾಲೂಕಿನಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ವ್ಯಾಪಕವಾಗಿ ಕುಸುಬೆ ಬೆಳೆಯಲಾಗಿದೆ. ಕಪ್ಪು ಭೂಮಿಯಲ್ಲಿ, ಕಡಿಮೆ ತೇವಾಂಶದಲ್ಲಿ ಹಿಂಗಾರಿನ ಇಬ್ಬನಿಗೆ ಸಮೃದ್ಧವಾಗಿ ಬೆಳೆಯುವ ಕುಸುಬೆಯನ್ನು ತಾಲೂಕಿನ ಕರಜಗಿ ಹೋಬಳಿಯಲ್ಲಿ ಹೆಚ್ಚು ಬೆಳೆಯಲಾಗಿದೆ. ಪ್ರತಿ ಹಿಂಗಾರಿನಲ್ಲಿ ಕಡಲೆ ಮಾತ್ರ ಬೆಳೆಯುತ್ತಿದ್ದ ತಾಲೂಕಿನ ರೈತರು ದಶಕಗಳ ನಂತರ ಪರ್ಯಾಯ ಬೆಳೆಯಾಗಿ ಕುಸುಬೆ ಬೆಳೆದಿದ್ದಾರೆ. ಪ್ರತಿ ಬಾರಿ ನಿರಂತರವಾಗಿ ಏಕ ಬೆಳೆ ಕಡಲೆಯನ್ನು ಬೆಳೆಯುವುದರಿಂದ ಸೊರಗು ರೋಗಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಪರ್ಯಾಯವಾಗಿ ಕುಸುಬೆ ಬೆಳೆಯುವುದರಿಂದ ರೋಗ ಹಾಗೂ ಕೀಟಗಳ ಹಾವಳಿಯಿಂದ ಪಾರಾಗಬಹುದು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಮುಂಗಾರಿನಲ್ಲಿ ಅಪಾರ ಪ್ರಮಾಣದ ಮಳೆ ಹಾಗೂ ಅತಿವೃಷ್ಟಿಯಿಂದ ರೈತರು ಬಿತ್ತನೆ ಮಾಡಿದ ಉದ್ದು, ಹೆಸರು, ತೊಗರಿ, ಹತ್ತಿ ಎಲ್ಲಾ ಬೆಳೆಗಳು ಹಾಳಾಗಿ ಹೇಳಿಕೊಳ್ಳುವಂತಹ ಇಳುವರಿ ಬರದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಹಿಂಗಾರಿ ನಲ್ಲಿ ಉತ್ತಮ ಮಳೆಯಿಂದ ಭೂಮಿಯಲ್ಲಿ ಉತ್ತಮ ತೇವಾಂಶದಿಂದ ನೂರಾರು ಎಕರೆಯಲ್ಲಿ ಕುಸುಬೆ ಸಮೃದ್ಧವಾಗಿ ಬೆಳೆದಿದ್ದು, ಮುಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿರುವ ರೈತರ ಕೈಹಿಡಿಯುವ ಭರವಸೆ ಮೂಡಿಸಿದೆ.25 ವರ್ಷಗಳ ಹಿಂದೆ ಕುಸುಬೆ ಬೆಳೆಯುತ್ತಿದ್ದೆವು. ಬೆಳೆಯು ಮುಳ್ಳನ್ನು ಹೊಂದಿರುವ ಕಾರಣ ಕಟಾವು ಮತ್ತು ಒಕ್ಕಲು ಮಾಡಲು ಸಮಸ್ಯೆಯಾಗುತ್ತಿದ್ದರಿಂದ ಕುಸುಬೆ ಬೆಳೆಯಲು ಆಸಕ್ತಿ ಕಳೆದುಕೊಂಡಿದ್ದೆವು. ಈಗ ಮತ್ತೆ ಕುಸುಬೆ ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 8,000ದಿಂದ ₹ 9,000 ಬೆಲೆ ಇದ್ದು, ಎಕರೆಗೆ ಐದಾರು ಕ್ವಿಂಟಲ್ ಇಳುವರಿ ನಿರೀಕ್ಷೆ ಇದೆ. ಗಿಡಗಳು ಎತ್ತರ ಹಾಗೂ ಎಲೆಗಳು ದೊಡ್ಡದಾಗಿದ್ದು, ಹೊಲಕ್ಕೆ ಉತ್ತಮ ಗೊಬ್ಬರವೂ ಸಿಗಲಿದೆ. ಹೀಗಾಗಿ ಕಡಲೆ ಬದಲು ಕುಸುಬೆ ಬೆಳೆದಿದ್ದೇನೆ ಎಂದು ತಾಲೂಕಿನ ಮಣ್ಣೂರ ಗ್ರಾಮದ ಕುಸುಬೆ ಬೆಳೆದಿರುವ ರೈತರು ತಿಳಿಸಿದರು.
ತಾಲೂಕಿನಲ್ಲಿ ಕುಸುಬೆಯನ್ನು ಸುಧೀರ್ಘ ಅವಧಿಯ ನಂತರ ರೈತರು ಬೆಳೆದಿದ್ದಾರೆ. ಏಕ ಬೆಳೆ ಕಡಲೆಯಿಂದ ಸೊರಗು ರೋಗ ಎದುರಾಗುವ ಸಾಧ್ಯತೆ ಇದೆ. ಕುಸುಬೆ ಬೆಳೆ ಉತ್ತಮ ಪರ್ಯಾಯವಾಗಿದೆ. ಕರಜಗಿ ಹೋಬಳಿಯಲ್ಲಿ ಹೆಚ್ಚು ಬೆಳೆಯಲಾಗಿದ್ದು, ಈ ಹಂತದಲ್ಲಿ ಯಾವುದೇ ರೋಗ ಕಂಡುಬಂದಿಲ್ಲ. ಎಲೆ ರಸ ಹೀರುವ ಕೀಟಬಾಧೆಗೆ ಕ್ವಿನಾಲ್ ಫಾಸ್ ಹಾಗೂ ಕಾಯಿಕೊರಕ ಹುಳು ಕಾಣಿಸಿಕೊಂಡಲ್ಲಿ ಮೊನೊಕ್ರೊಟೋಪಾಸ್ ಔಷಧ ಸಿಂಪಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಪೋಟೊಅಫಜಲಪುರದಲ್ಲಿ ರೈತರು ಕಡಿಮೆ ತೇವಾಂಶದಲ್ಲಿ ಹಿಂಗಾರಿನ ಇಬ್ಬನಿಗೆ ಸಮೃದ್ಧವಾಗಿ ಬೆಳೆಯುವ ಕುಸುಬೆಯನ್ನು ತಾಲೂಕಿನ ಕರಜಗಿ ಹೋಬಳಿಯಲ್ಲಿ ಹೆಚ್ಚು ಬೆಳೆದಿರುವುದು.