ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕೇಂದ್ರ ಸರ್ಕಾರದಿಂದ ರೈತರ ಆದಾಯ ದುಪ್ಪಟ್ಟುಗೊಳ್ಳಲಿಲ್ಲ, ಬದಲಿಗೆ, ಕೃಷಿ ಸಬ್ಸಿಡಿಗಳನ್ನು ಕಡಿತಗೊಳಿಸಿ, ಕೃಷಿ ಪರಿಕರಗಳ ಬೆಲೆ ಹೆಚ್ಚಿಸಿ ಕೃಷಿಗೆ ತಗಲುವ ವೆಚ್ಚ ದುಪ್ಪಟ್ಟುಗೊಳಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.ಅವರು ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಸ್ವಾಮಿನಾಥನ್ ವರದಿಯನ್ವಯ ಕೃಷಿ ಉತ್ಪನ್ನಗಳಿಗೆ ಬೆಲೆ ನೀಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸುವುದರ ಮೂಲಕ ಮಾತಿಗೆ ತಪ್ಪಿ ರೈತ ಸಮುದಾಯಕ್ಕೆ ಮೋಸ ಮಾಡಿದರು ಎಂದರು.
ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು 5 ಲಕ್ಷ ಕೋಟಿ ಹಣ ಸಾಕು. ಆದರೆ ಹಣವಿಲ್ಲ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ, ಆದರೆ ಮೋದಿಯವರ ಆಳ್ವಿಕೆಯಲ್ಲಿ ಕಾರ್ಪೋರೇಟ್ ಕಂಪನಿಗಳ 20 ಲಕ್ಷ ಕೋಟಿ ಸಾಲವ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು.ಸರ್ಕಾರ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದೆ. ಆಪತ್ಕಾಲಿನ ನಿಧಿಯನ್ನೂ ಕೂಡ ದುರ್ಬಳಕೆ ಮಾಡಿಕೊಂಡಿದೆ. ಬದಲಿಗೆ ವಿಮೆ ಕಡೆ ಬೊಟ್ಟು ಮಾಡುತ್ತಿದೆ. ಬೆಳೆ ವಿಮೆ ಪೂರ್ತಿ ಖಾಸಗಿ ಕಂಪನಿಗಳ ಕೈಗಳಲ್ಲಿದ್ದು, ರೈತರಿಗೆ ಮಹಾ ವಂಚನೆ ನಡೆಯುತ್ತಿದೆ.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘದ ಗೌರವಾಧ್ಯಕ್ಷರು ಹಾಗೂ ರೈತ ಸರ್ವೋದಯ ಪಕ್ಷದ ಮುಖಂಡರಾದ ಚಾಮರಸ ಮಾಲೀಪಾಟೀಲ ಮಾತನಾಡಿ, 1987ರಲ್ಲಿ ರಾಜ್ಯದಲ್ಲಿ ಗುಂಡೂರಾವ ಸರ್ಕಾರವಿದ್ದಾಗ ಸಾವಿರಾರು ರೈತರ ಆತ್ಮಹತ್ಯೆ ನಡೆದವು. ಹಾಗಾಗಿ ಗುಂಡು ಹೊಡೆದ ಗುಂಡುರಾವ ಸರ್ಕಾರಕ್ಕೆ ನಮ್ಮ ಮತವಿಲ್ಲ ಎಂಬ ಅಭಿಯಾನ ಹಮ್ಮಿಕೊಂಡು ಗುಂಡುರಾವ ಸರ್ಕಾರವನ್ನು ಸೋಲಿಸಲಾಗಿತ್ತು. ಹಾಗೇ 2014ರಿಂದ ಕಳೆದ 10 ವರ್ಷಗಳಿಂದ ಮೋದಿ ಸರ್ಕಾರ ರೈತರಿಗೆ ಮಾಡಿದ ಮೋಸ ಅಷ್ಟಿಷ್ಟಲ್ಲ ಎಂದರು.ಸಂಸತ್ತಿನಲ್ಲಿ ಮೂರು 3 ಕೃಷಿ ಕಾಯ್ದೆ ಜಾರಿಗೆ ತಂದು ರೈತರ ಬದುಕು ನಾಶ ಮಾಡಿದ್ದಾರೆ. ಇಂಥ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದೆಂದು ಮನೆ ಮನೆಗೆ ಅಭಿಯಾನ ಹಮ್ಮಿಕೊಂಡು ಎನ್.ಡಿ.ಎ ಸರ್ಕಾರದ ಕೈಗೆ ಅಧಿಕಾರ ನೀಡಬೇಡಿ ಎಂದು ಮನವಿ ಮಾಡಲಾಗುತ್ತಿದೆ. ನಾವು ಯಾವ ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ಆದರೆ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರವನ್ನು ಕಿತ್ತೊಗೆಯಿರಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಲ್ಲಿಯ ರೈತ ಬಾಂಧವರು ಈ ಗಂಭಿರತೆ ಅರಿತು ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಬೇಕಿದೆ ಎಂದವರು ಹೇಳಿದರು.
ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ, ಸರ್ವೋದಯ ಪಕ್ಷದ ಜಿಲ್ಲಾ ಅಧ್ಯಕ್ಷ ಕೊಂಡಿಬಾರಾವ ಪಾಂಡ್ರೆ, ರೈತ ಪ್ರಮುಖರಾದ ಖಾಸಿಮ್ ಅಲಿ, ನಾಗಶೆಟ್ಟೆಪ್ಪ ಲಂಜವಾಡೆ, ಶಾಂತಮ್ಮ ಮೂಲಗೆ, ಕರಬಸಪ್ಪ ಕರಬಸಪ್ಪ ಹುಡಗಿ, ಖಾನ್ ಸಾಬ್, ವೀರಾರೆಡ್ಡಿ ಪಾಟೀಲ, ಸನ್ಮುಖಪ್ಪ ಅಣದುರೆ, ವಿಠಲರೆಡ್ಡಿ ಅಣದುರ, ವಿಜಯಕುಮಾರ ಬಾವಗೆ, ಸೋಮನಾಥ ಇದ್ದರು.