ಚಡಚಣ ಹಾಗೂ ಇಂಡಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಹಾಗೂ ರೇವಣಸಿದ್ಧೇಶ್ವರ ಏತ ನೀರಾವರಿಯ ಎರಡನೇ ಹಂತದ ಕಾಮಗಾರಿ ಪ್ರಾರಂಭಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಬಳಿ ಹಮ್ಮಿಕೊಂಡ ಸತ್ಯಾಗ್ರಹಕ್ಕೆ ಜಿಲ್ಲಾ, ತಾಲೂಕು ಆಡಳಿತ ಸ್ಪಂದಿಸದ ಹಿನ್ನೆಲೆ ಶುಕ್ರವಾರ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುನಾಥ ಬಗಲಿ ಹಾಗೂ ಚಂದಪ್ಪ ಜೆಟ್ಟೆಪ್ಪ ಮಿರಗಿ ಅವರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಇಂಡಿ
ಚಡಚಣ ಹಾಗೂ ಇಂಡಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಹಾಗೂ ರೇವಣಸಿದ್ಧೇಶ್ವರ ಏತ ನೀರಾವರಿಯ ಎರಡನೇ ಹಂತದ ಕಾಮಗಾರಿ ಪ್ರಾರಂಭಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಬಳಿ ಹಮ್ಮಿಕೊಂಡ ಸತ್ಯಾಗ್ರಹಕ್ಕೆ ಜಿಲ್ಲಾ, ತಾಲೂಕು ಆಡಳಿತ ಸ್ಪಂದಿಸದ ಹಿನ್ನೆಲೆ ಶುಕ್ರವಾರ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಗುರುನಾಥ ಬಗಲಿ ಹಾಗೂ ಚಂದಪ್ಪ ಜೇಟ್ಟೆಪ್ಪ ಮಿರಗಿ ಅವರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ಈ ವೇಳೆ ಮಾತನಾಡಿದ ರೈತ ಮುಖಂಡ ಗುರುನಾಥ ಬಗಲಿ ಅವರು, ರೈತರ ಧರಣಿ ಸತ್ಯಾಗ್ರಹಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಗದ ಕಾರಣ ಇಂದಿನಿಂದ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಅಮರಣ ಉಪವಾಸ ಸತ್ಯಾಗ್ರಹ ಶಾಂತಿಯುತ ಪ್ರತಿಭಟನೆಯ ಅತ್ಯುನ್ನತ, ಅತ್ಯಂತ ಶಕ್ತಿಶಾಲಿ ರೂಪವಾಗಿದೆ. ಬೇಡಿಕೆಗಳು ಈಡೇರುವವರೆಗೆ, ಪ್ರಾಣ ಹೋಗುವವರೆಗೆ ಯಾವುದೇ ಆಹಾರ ಸೇವಿಸದೆ ಉಪವಾಸ ಮಾಡುವ ಪಣ ತೊಟ್ಟಿದ್ದೇನೆ. ಹಿಂಸೆಗೆ ಆಸ್ಪದ ನೀಡದೆ, ಆತ್ಮಶಕ್ತಿ ಮತ್ತು ಸತ್ಯದ ಮಾರ್ಗದಲ್ಲಿ ಅಹಿಂಸಾತ್ಮಕ ಅಸ್ತ್ರವಾದ ಮಹಾತ್ಮ ಗಾಂಧೀಜಿಯವರ ಹಾಗೂ ದಕ್ಷ ಪ್ರಾಮಾಣಿಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ದಿನವಾದ ಇಂದಿನಿಂದ ಈ ನಿರ್ಣಯಕ್ಕೆ ಬರಲಾಗಿದೆ ಎಂದು ಹೇಳಿದರು.
ಈ ವೇಳೆ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಇಂಡಿ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಈರಪ್ಪ ಗೋಟ್ಯಾಳ, ಸೋಮಶೇಖರ ಬ್ಯಾಳಿ, ನಾಗಪ್ಪ ಮಕಣಿ, ಚನ್ನಪ್ಪ ಮಿರಗಿ, ಅಂಬಣ್ಣ ಪಂತೋಜಿ, ದಸ್ತಗೀರ ಬಾಗವಾನ, ಶರಣಪ್ಪ ತಾರಾಪೂರ, ಗಂಗಪ್ಪ ಅಹಿರಸಂಗ, ಸಿದ್ದು ಸಾಹುಕಾರ ಮೇತ್ರಿ, ಅಶೋಕ ಹೊಸಮನಿ, ಚಂದ್ರಕಾಂತ ಮೇತ್ರಿ, ಬಸವರಾಜ ಪಂತೋಜಿ, ಶರಣಪ್ಪ ಸುಧಾಮ, ಅಮಸಿದ್ದ ಅಂಗಡಿ ಅನೇಕ ರೈತರು ಉಪಸ್ಥಿತರಿದ್ದರು.