ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ 13 ಹಳ್ಳಿಗಳ ಗ್ರಾಮದ ರೈತರ ಭೂಮಿಯ ಸ್ವಾಧೀನದ ನಿರ್ಧಾರವನ್ನು ಹಿಂದಕ್ಕೆ ಪಡೆದ ರಾಜ್ಯ ಸರ್ಕಾರದ ನಿಲುವು ಸ್ವಾಗತಿಸಿ ವಿವಿಧ ರೈತ ಸಂಘಟನೆಗಳು ನಗರದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದವು. ಸರ್ಕಾರ ಭೂ ಸ್ವಾಧೀನ ನೀತಿ ಹಿಂತೆಗೆದುಕೊಂಡಿರುವುದು ಸಂತೋಷದ ವಿಷಯ. ಇದು ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ, ಭೂಮಿ ಕೊಡಲು ತಯಾರಾಗಿರುವ ರೈತರಿಗೆ ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತೇವೆಂದು ಹೇಳಿರುವುದು ಸ್ಪಷ್ಟವಾಗಿ ರಿಯಲ್ ಎಸ್ಟೇಟ್, ಹಾಗೂ ಭೂ ಮಾಫಿಯ ವ್ಯವಹಾರಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಸರ್ಕಾರದ ಈ ಧೋರಣೆ ಅತ್ಯಂತ ಖಂಡನೀಯವಾದದ್ದು.ಹಸಿರು ವಲಯದ ಭೂಮಿಗೆ ಭೂಪರಿವರ್ತನೆ ಮಾಡಿಕೊಡುತ್ತೇವೆಂದು ಹೇಳಿರುವುದು ಸರ್ಕಾರವೇ ರಹದಾರಿ ನೀಡಿದಂತಾಗುತ್ತದೆ. ಹಾಗಾಗಿ, ಖಾಸಗಿಯವರು ಭೂ ಖರೀದಿಸುವುದನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು. ಪಾರಂಪರಿಕವಾಗಿ ಜೀವನೋಪಾಯಕ್ಕಾಗಿ ಇರುವ ರೈತರ ಭೂಮಿಯನ್ನು ಉಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆಯೆ ಹೊರತು, ಬಂಡವಾಳಗಾರರು ಹಾಗೀ ದೊಡ್ಡದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕಬಾರದು ಎಂದು ರೈತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಇಲ್ಲಿನ ನಗರೂರು ನಾರಾಯಣ ರಾವ್ ಉದ್ಯಾನವನದಿಂದ ಮೆರವಣಿಗೆ ಆರಂಭಿಸಿದ ರೈತ ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು ಗಡಗಿಚನ್ನಪ್ಪ ವೃತ್ತದ ಮೂಲಕ ಶ್ರೀಕನಕ ದುರ್ಗಮ್ಮ ದೇವಸ್ಥಾನ ಬಳಿ ಜಮಾಯಿಸಿ, ವಿಜಯೋತ್ಸವ ಆಚರಿಸಿದರು.ರಾಜ್ಯ ರೈತ ಸಂಘ ರಾಜ್ಯ ಅಧ್ಯಕ್ಷ ಮಾಧವರೆಡ್ಡಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು, ಎಐಕೆಕೆಎಂಎಸ್ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್, ರಾಜ್ಯ ರೈತ ಸಂಘದ ಸಂಗನಕಲ್ಲು ಕೃಷ್ಣಪ್ಪ, ಎಐಕೆಕೆಎಂಎಸ್ ರಾಜ್ಯ ಸಮಿತಿ ಸದಸ್ಯ ಹನುಮಂತಪ್ಪ, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ, ಲೇಪಾಕ್ಷಿ, ಬಸವರಾಜ ಸ್ವಾಮಿ, ದೊಡ್ಡನಾಗಪ್ಪ, ಪ್ರಭಾಕರ ರೆಡ್ಡಿ ಪಿ.ಚಾಗನೂರು, ನಾನಪ್ಪ, ಬಿ.ಸುರೇಂದ್ರ, ವಿರೂಪಾಕ್ಷ, ಚಾನಾಳ್ ಗಣೇಶ್, ಬಗ್ಗೂರಪ್ಪ ಮತ್ತಿತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.