ಸಾರಾಂಶ
ಹುಬ್ಬಳ್ಳಿ:
ರಾಜ್ಯಾದ್ಯಂತ ಉಂಟಾಗಿರುವ ವಕ್ಫ್ ಗೊಂದಲವು ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ವಕ್ಫ್ ಬೋರ್ಡ್‌ಗೆ ಆಸ್ತಿ ಕೊಡಿಸುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ಆಸ್ತಿ ಕುರಿತು ರೈತರಿಗೆ ನೋಟಿಸ್ ನೀಡಿದ್ದು ರಾಜ್ಯ ಸರ್ಕಾರ ಆಡಳಿತ ವೈಫಲ್ಯ. ಇದನ್ನು ಯಾರು ಕೇಳದೇ ಇದ್ದಿದ್ದರೆ ಅದು ವಕ್ಫ್ ಬೋರ್ಡ್ ಆಸ್ತಿ ಆಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಇಷ್ಟೊಂದು ಹೀನ ಪರಿಸ್ಥಿತಿಗೆ ಇಳಿಯಬಾರದಿತ್ತು. ಕೂಡಲೇ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು ರೈತರ ಕ್ಷಮೆಯಾಚಿಸಲಿ ಎಂದು ವಾಗ್ದಾಳಿ ನಡೆಸಿದರು.
ಅರಾಜಕತೆ ಸೃಷ್ಟಿ:ರೈತರ ಜಮೀನು ಕಬಳಿಸುವ ಈ ಕುತಂತ್ರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ರೈತರ ಹಿತಾಸಕ್ತಿ ಕಾಪಾಡಲು, ತುಷ್ಟೀಕರಣ ಖಂಡಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ನಮ್ಮ ಕಾಲದಲ್ಲಿ ಒಂದೋ ಎರಡು ಪ್ರಕರಣ ಆಗಿರಬಹುದು. ಅದನ್ನು ಸ್ಥಳೀಯ ಅಧಿಕಾರಿಗಳನ್ನು ಕೇಳಬೇಕು. ಈ ಕುರಿತು ನಮ್ಮ ಶೋಧನ ಸಮಿತಿ ಸಮಗ್ರ ವರದಿ ತಯಾರಿಸಲಿದೆ ಎಂದರು.
ಸಿಎಂ ರಾಜೀನಾಮೆ ನೀಡಲಿ:ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಸಿದ್ದರಾಮಯ್ಯ, ಅವರ ಕುಟುಂಬದವರು ಹಾಗೂ ಅಧಿಕಾರಿಗಳು ಇಡಿ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ಕಾರದ ಮೇಲಿನ ಆಡಳಿತ ನಂಬಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೂಡಲೇ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.