ಕಬ್ಬಿನ ದರ ನಿಗದಿಯಾಗುವವರೆಗೆ ಸಕ್ಕರೆ ಮಾರಾಟ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಸಕ್ಕರೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗೋದಾಮಿಗೆ ಬೀಗ ಹಾಕುವಂತೆ ಪಟ್ಟು ಹಿಡಿದರು. ಬಳಿಕ ಗೋದಾಮಿನಲ್ಲಿದ್ದ ಟ್ರ್ಯಾಲಿಗಳನ್ನು ಹೊರಗೆಳೆದು ಸಕ್ಕರೆ ಗೋದಾಮಿಗೆ ರೈತರೇ ಬೀಗ ಹಾಕಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿ ಟನ್ ಕಬ್ಬಿನ ದರ ₹5, 500 ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಮೈಷುಗರ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮೈಷುಗರ್ ಕಾರ್ಖಾನೆ ಆವರಣದ ಸಕ್ಕರೆ ಗೋದಾಮಿಗೆ ರೈತ ಸಂಘದ ಮುಖಂಡರಾದ ಪ್ರೊ.ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ರೈತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಮುತ್ತಿಗೆ ನಂತರ ರೈತರು ಸಕ್ಕರೆ ಗೋದಾಮಿನತ್ತ ತೆರಳಲು ಮುಂದಾದಾಗ ಮೈಷುಗರ್ ಆಡಳಿತ ಮಂಡಳಿ ಆರಂಭದಲ್ಲಿ ಅವಕಾಶ ನಿರಾಕರಿಸಿತು. ಈ ವೇಳೆ ಕಾರ್ಖಾನೆ ಗೇಟ್ ಮುಚ್ಚಲಾಗಿದ್ದು, ರೈತರು ಒಳನುಗ್ಗಲು ಯತ್ನಿಸಿದರು. ಕೆಲವರು ಗೇಟ್ ಏರಲು ಮುಂದಾದಾಗ ಪೊಲೀಸರು ತಡೆದರು.

ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಕಾರ್ಖಾನೆ ಆವರಣದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ರೈತರ ಆಕ್ರೋಶ ಹೆಚ್ಚಾದ ಬಳಿಕ ಅಧಿಕಾರಿಗಳು ಗೇಟ್ ತೆರೆದರು. ಪ್ರತಿಭಟನಾಕಾರರು ಕಾರ್ಖಾನೆ ಆವರಣ ಪ್ರವೇಶಿಸಿ ಸಕ್ಕರೆ ಗೋದಾಮಿನ ಬಳಿ ಆಗಮಿಸಿ ಕಾರ್ಖಾನೆಯಲ್ಲಿ ಸಕ್ಕರೆ ಮಾರಾಟ ನಡೆಯುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಬ್ಬಿನ ದರ ನಿಗದಿಯಾಗುವವರೆಗೆ ಸಕ್ಕರೆ ಮಾರಾಟ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಸಕ್ಕರೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗೋದಾಮಿಗೆ ಬೀಗ ಹಾಕುವಂತೆ ಪಟ್ಟು ಹಿಡಿದರು. ಬಳಿಕ ಗೋದಾಮಿನಲ್ಲಿದ್ದ ಟ್ರ್ಯಾಲಿಗಳನ್ನು ಹೊರಗೆಳೆದು ಸಕ್ಕರೆ ಗೋದಾಮಿಗೆ ರೈತರೇ ಬೀಗ ಹಾಕಿದರು.

ಕಬ್ಬಿನ ದರ ನಿಗದಿ ವಿಚಾರದಲ್ಲಿ ಸರ್ಕಾರ ತನ್ನ ಭರವಸೆಯನ್ನು ಈಡೇರಿಸಬೇಕು. ಈ ಹೋರಾಟ ಸಾಂಕೇತಿಕವಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮುಖಂಡರಾದ ತನು, ಫಯಾಜ್, ಪರ್ವೀಜ್, ವಿಜಯ್ ಕುಮಾರ್, ಮಂಜುನಾಥ್, ಲಿಂಗಪ್ಪಾಜಿ, ಜವರೇಗೌಡ, ಸುರೇಶ್ ಗೌಡ, ನಾಗರಾಜು, ಶಿವರಾಂ, ಶಿವಳ್ಳಿ ಚಂದ್ರಶೇಖರ್, ಮರಿಚನ್ನೇಗೌಡ, ಪ್ರಕಾಶ್ ಆನಂದ, ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.