ಭದ್ರಾ ಡ್ಯಾಂನಿಂದ ಬಲ ಮತ್ತು ಎಡನಾಲೆಗಳಿಗೆ ನೀರು ಹರಿಸುವ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ನ.17ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಭಾರತೀಯ ರೈತ ಒಕ್ಕೂಟ ಭದ್ರಾ ಶಾಖೆ ಅಧ್ಯಕ್ಷ ಶಾಬನೂರು ಎಚ್.ಆರ್. ಲಿಂಗರಾಜ ಎಚ್ಚರಿಸಿದ್ದಾರೆ.
- ರೈತ ಒಕ್ಕೂಟದ ಎಚ್.ಆರ್.ಲಿಂಗರಾಜ, ಬಿಜೆಪಿ ರೈತ ಮೋರ್ಚಾದ ಪೂಜಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಬಲ ಮತ್ತು ಎಡನಾಲೆಗಳಿಗೆ ನೀರು ಹರಿಸುವ ಆದೇಶವನ್ನು ತಕ್ಷಣ ರದ್ದುಪಡಿಸುವಂತೆ ನ.17ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಭಾರತೀಯ ರೈತ ಒಕ್ಕೂಟ ಭದ್ರಾ ಶಾಖೆ ಅಧ್ಯಕ್ಷ ಶಾಬನೂರು ಎಚ್.ಆರ್. ಲಿಂಗರಾಜ ಎಚ್ಚರಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಅಚ್ಚುಕಟ್ಟು ಪ್ರದೇಶದ ಸುಮಾರು 25 ಸಾವಿರಕ್ಕೂ ಅಧಿಕ ರೈತರು ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದು, ತಕ್ಷಣವೇ ನಾಲೆಗೆ ನೀರು ಬಿಡುವ ಆದೇಶವನ್ನು ರದ್ದುಪಡಿಸಬೇಕು ಎಂದರು.
ಅಚ್ಚುಕಟ್ಟು ಮೇಲ್ಭಾಗದ ಅಡಕೆ ಬೆಳೆಗಾರರ ರಕ್ಷಣೆಗೆ ನ.15ರ ಮಧ್ಯ ರಾತ್ರಿಯಿಂದಲೇ ಬಲದಂಡೆ ನಾಲೆಗೆ 10 ದಿನಗಳ ಕಾಲ 1 ಸಾವಿರ ಕ್ಯುಸೆಕ್, ಎಡದಂತೆ ನಾಲೆಗೆ 500 ಕ್ಯುಸೆಕ್ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದ್ದು ಖಂಡನೀಯ. ಭದ್ರಾವತಿ ಶಾಸಕ ಸಂಗಮೇಶ್ವರ, ಎಚ್.ಆರ್. ಬಸವರಾಜಪ್ಪ ಒತ್ತಡಕ್ಕೆ ಮಣಿದು ನೀರು ಹರಿಸುವುದನ್ನು ನೋಡಿದರೆ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ದುರ್ಬಲರಾಗಿದ್ದಾರೇನೋ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.ಐಸಿಸಿ ಸಭೆ ತೀರ್ಮಾನದಂತೆ ನಾಲೆಗೆ ನೀರು ಹರಿಸಬೇಕು. ಆದರೆ, ಭದ್ರಾ ನೀರಾವರಿ ಸಲಹಾ ಸಮಿತಿಯೆಂಬುದೇ ಸತ್ತು ಹೋಗಿದೆ. ಭದ್ರಾ ಕಾಡಾ ಸಮಿತಿ ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಸಚಿವ ಮಧು ಬಂಗಾರಪ್ಪಗೆ ವಜಾ ಮಾಡಬೇಕು. ಕಾಡಾ ಅಧ್ಯಕ್ಷ ಸ್ಥಾನವನ್ನು ಅಚ್ಚುಕಟ್ಟು ಬಗ್ಗೆ ಅರಿವಿದ್ದವರಿಗೆ ನೀಡಲಿ. ಭದ್ರಾ ಡ್ಯಾಂನಲ್ಲಿ 55.52 ಟಿಎಂಸಿ ನೀರು ಸಂಗ್ರಹವಿದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆಂದು 8.5 ಟಿಎಂಸಿ ನೀರು ಸಾಕು. ಆದರೆ, ಅಧಿಕಾರಿಗಳು 13.5 ಟಿಎಂಸಿ ಬೇಕೆಂಬುದಾಗಿ ಸುಳ್ಳು ಲೆಕ್ಕ ನೀಡುತ್ತಿದ್ದಾರೆ. ಆವಿಯಾಗುವ, ಇಂಗುವ ನೀರು ಎಲ್ಲವನ್ನೂ ತೆಗೆದರೂ ಡ್ಯಾಂನಲ್ಲಿ 44.5 ಟಿಎಂಸಿ ನೀರು ಇದ್ದೇ ಇರುತ್ತದೆ. ಬೇಸಿಗೆ ಹಂಗಾಮಿಗೆ ನಿರಂತರವಾಗಿ ನೀರು ಹರಿಸಲು 30 ಟಿಎಂಸಿ ನೀರು ಸಾಕು. ಆದರೆ, ಇಂದಿಗೂ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿಕೊಂಡು ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ದಾವಣಗೆರೆ ರೈತರ ಪರ ಧ್ವನಿ ಎತ್ತಿ, ನ್ಯಾಯ ಕೊಡಿಸಲೆಂದು ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಲಿಂಗರಾಜ ಎಚ್ಚರಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ್ ಮಾತನಾಡಿ, ಹಿರಿಯೂರು ಉಪ ಚುನಾವಣೆ, ಕೆಲ ಶಾಸಕರ ಒತ್ತಡಕ್ಕೆ ಮಣಿದು, ಮೇಲ್ದಂಡೆಗೆ 4 ಟಿಎಂಸಿ ನೀರು ಹರಿಸಲಾಗಿದೆ. ಈಗ ಮತ್ತೆ 10 ದಿನ ನೀರು ಹಸಿರು ಮುಂದಾಗಿರುವುದು ದಾವಣಗೆರೆ ರೈತರ ಪಾಲಿಗೆ ಮರಣ ಶಾಸನವಾಗಿದೆ. ನೀರು ದೊರೆಯದೇ ರೈತರು ಏನಾದರೂ ಆತ್ಮಹತ್ಯೆಯ ಹಾದಿ ಹಿಡಿದರೆ ಎಲ್ಲರ ಸಾವಿಗೆ ಸರ್ಕಾರ ನೇರ ಹೊಣೆ ಆಗಬೇಕಾದೀತು ಎಂದರು.ಒಕ್ಕೂಟದ ಮುಖಂಡರಾದ ಆವರಗೊಳ್ಳ ಬಿ.ಎಂ.ಷಣ್ಣುಖಯ್ಯ, ಬೆಳವನೂರು ಬಿ.ನಾಗೇಶ್ವರ ರಾವ್, ಆರನೇಕಲ್ಲು ವಿಜಯಕುಮಾರ, ಎ.ಎಂ.ಮಂಜುನಾಥ, ಕುಂದುವಾಡ ಅಣ್ಣಪ್ಪ, ಕಂಚಿಕಟ್ಟೆ ಹನುಮಂತಪ್ಪ, ತ್ಯಾವಣಿಗೆ ಶಿವರಾಜ ಇತರರು ಇದ್ದರು.
- - -* (ಟಾಪ್ ಕೋಟ್)
ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸಲು ಸರ್ಕಾರ ಆದೇಶಿಸಿರುವುದು ಭತ್ತದ ಬೆಳೆಗಾರರಿಗೆ ವಿಷ ಕೊಟ್ಟಂತಾಗಿದೆ. ಸರ್ಕಾರ ಐಸಿಸಿಯನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದೇ, ಅಕ್ರಮವಾಗಿ ನೀರೆತ್ತುವವರ ಪರ ವಹಿಸಿದೆ. ಮುಂಗಾರು ಹಂಗಾಮಿನ ಬೆಳೆಗೆ ನೀರು ಕೊಡದೇ ರೈತರಿಗೆ ಮೋಸ ಮಾಡಿದ್ದಾರೆ. ಬೇಸಿಗೆ ಬೆಳೆಗೂ ನೀರು ವಂಚಿಸಿದರೆ ರೈತರ ಶಾಪ ನಿಮಗೆಲ್ಲರಿಗೂ ತಟ್ಟುವುದು ಶತಃಸಿದ್ಧ. ಸರ್ಕಾರ ಭತ್ತದ ಬೆಳೆಗಾರರ ಪರವಾಗಿದ್ದರೆ ಈ ಕೂಡಲೇ ಆದೇಶ ಹಿಂಪಡೆಯಲಿ.- ಶಾಬನೂರು ಎಚ್.ಆರ್.ಲಿಂಗರಾಜ, ಅಧ್ಯಕ್ಷ, ಭಾರತೀಯ ರೈತ ಒಕ್ಕೂಟ.
- - --16ಕೆಡಿವಿಜಿ3:
ದಾವಣಗೆರೆಯಲ್ಲಿ ಸೋಮವಾರ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.