ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ದೇಶದಲ್ಲಿ ಶೇ. 80 ರಷ್ಟಿರುವ ರೈತರ ಬದುಕು ಇಂದು ಶೋಚನೀಯವಾಗಿದ್ದು, ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯುವಂತಾಗಬೇಕು. ಇಲ್ಲವೇ ಸರ್ಕಾರವೇ ಕೊಂಡು ಮಾರಾಟ ಮಾಡುವಂತಹ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಸಂಸದ ಜಿ.ಎಸ್. ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.ಸಿದ್ಧಗಂಗಾ ಮಠದಲ್ಲಿ ಆಯೋಜಿಸಿರುವ 60ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿಯಿಂದ ಇಂದು ರೈತ ಸಾಕಷ್ಟು ತೊಂದರೆಯನ್ನು ಅನುಭವಿಸುತಿದ್ದು, ಇದು ತಪ್ಪಬೇಕೆಂದರೆ ಸರ್ಕಾರವೇ ಮುಂದೆ ನಿಂತು ರೈತರ ಬೆಳೆಗಳನ್ನು ಖರೀದಿಸುವ ಕೆಲಸ ಮಾಡಬೇಕೆಂದರು.
ಆಧುನಿಕ ಭಾರತವನ್ನು ಹೇಗೆ ರೂಪಿಸಬೇಕೆಂದು ನೆಹರು ಕನಸು ಕಂಡಿದ್ದರೋ, ಅದನ್ನು ಮೋದಿ ನನಸು ಮಾಡಿ ತೋರಿಸಿದ್ದಾರೆ. ಇಬ್ಬರ ಗುರಿಯೂ ಒಂದೇ ಆಗಿದ್ದು, ದಾರಿಗಳು ಬೇರೆಯಾಗಿವೆ. ನಾವೆಲ್ಲರೂ ಜಾತ್ಯತೀತ ಮನೋಭಾವ ವನ್ನು ಬೆಳೆಸಿಕೊಂಡು, ನಾವೆಲ್ಲರೂ ಒಂದೇ ಎನ್ನುವ ರೀತಿ ನಡೆದುಕೊಂಡರೆ ಮಾತ್ರ ದೇಶದ ಪ್ರಗತಿಯ ವೇಗ ಹೆಚ್ಚಲಿದೆ ಎಂದರು.ಜಿಲ್ಲಾ ಪಂಚಾಯಿತಿ ಸಿಯೊಓ ಜಿ. ಪ್ರಭು ಮಾತನಾಡಿ, ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ, ವಿಜ್ಞಾನದ ಜೊತೆಗೆ ಜ್ಞಾನವನ್ನು ರೈತರು ಮತ್ತು ಮಕ್ಕಳಿಗೆ ನೀಡುತ್ತಾ ಬಂದಿದೆ. ಸಿದ್ಧಗಂಗಾ ಮಠ ಜ್ಞಾನ, ಭಕ್ತಿ, ದಾಸೋಹ ಕೇಂದ್ರದ ಜೊತೆಗೆ, ಶಕ್ತಿ ಕೇಂದ್ರವಾಗಿಯೂ ರೂಪಗೊಂಡಿದೆ. ಇಂತಹ ವಸ್ತುಪ್ರದರ್ಶನಗಳನ್ನು ಮಕ್ಕಳು ಹೆಚ್ಚಾಗಿ ನೋಡುವುದರ ಮೂಲಕ ಅವರಿಗೆ ಇರುವ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಗಮನಹರಿಸಬೇಕು. ನಮ್ಮ ಸಂಸ್ಕೃತಿ, ಪರಂಪರೆಯ ಭಾಗವಾಗಿರುವ ದನಗಳ ಜಾತ್ರೆ ಸಹ ವಿಶೇಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುರೇಶಗೌಡ ಮಾತನಾಡಿ, ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ನುಡಿದಂತೆ ನಡೆದವರು. ಮಕ್ಕಳಿಗೆ ಜ್ಞಾನದ ಜೊತೆಗೆ, ಪ್ರೀತಿ, ಭಕ್ತಿಯನ್ನು ನೀಡಿ, ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಯಲು ಸಹಕಾರಿಯಾಗಿದ್ದಾರೆ. ರೈತರು ಮತ್ತು ಯುವ ಉದ್ದಿಮೆದಾರರನ್ನು ಗಮನದಲ್ಲಿಟ್ಟುಕೊಂಡು ಈ ವಸ್ತುಪ್ರದರ್ಶನ ವನ್ನು ಕಳೆದ ೮೦ ವರ್ಷಗಳಿಂದ ಆಯೋಜಿಸುತ್ತಾ ಬಂದಿದ್ದು, ಶಿಕ್ಷಣದ ಜೊತೆಗೆ, ಬಡವರ ಕಲ್ಯಾಣಕ್ಕೆ ಒತ್ತು ನೀಡಿರುವ ಶ್ರೀಮಠದ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಇದಕ್ಕೆ ಭದ್ರ ತಳಹದಿ ಹಾಕಿಕೊಟ್ಟ ಶಿವಕುಮಾರ ಸ್ವಾಮೀಜಿಗಳಿಗೆ ಭಾರತರತ್ನ ಪ್ರಶಸ್ತಿ ನೀಡುವ ಮೂಲಕ ಅವರನ್ನು ಚರಿತ್ರೆಯಲ್ಲಿ ಅಜರಾಮರವಾಗಿ ಸುವಂತೆ ಒತ್ತಾಯಿಸಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಮಠದಿಂದ ನಡೆಯುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಶತಮಾನಗಳ ಇತಿಹಾಸವಿದೆ. ಕೋವಿಡ್ ಕಾಲದಲ್ಲಿಯೂ ನಮ್ಮ ಜಾತ್ರೆ ಮತ್ತು ವಸ್ತುಪ್ರದರ್ಶನ ನಿಲ್ಲಲ್ಲಿಲ್ಲ. ರೈತರಿಗೆ ಅಗತ್ಯ ಮಾಹಿತಿಯ ಜೊತೆಗೆ, ಕೃಷಿಯ ಭಾಗವಾಗಿರವ ಜಾನುವಾರಗಳ ಕೊಡು, ಕೊಳ್ಳುವಿಕೆಗೆ ಸಿದ್ಧಗಂಗಾ ಜಾತ್ರೆ ಒಂದು ವೇದಿಕೆಯಾಗಿದೆ. ಕೃಷಿ ಮತ್ತು ಕೈಗಾರಿಕೆ ದೇಶದ ಎರಡು ಕಣ್ಣುಗಳಿದ್ದಂತೆ, ಕೃಷಿಯಿಂದ ಅನ್ನ ದೊರೆತರೆ, ಕೈಗಾರಿಕೆಯಿಂದ ಪ್ರಗತಿ ಆಗಲಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಭಾರತ ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೆ ಅದಕ್ಕೆ ನಮ್ಮ ವಿಜ್ಞಾನಿಗಳ ಕೊಡುಗೆ ಆಪಾರ. ಹಸಿರು ಕ್ರಾಂತಿಯ ಹರಿಕಾರ ಡಾ.ಎಂ.ಎಸ್. ಸ್ವಾಮೀನಾಥ್ ಅಂತಹವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತರಾದ ಅಶ್ವಿಜ, ಕೆಪಿಎಸ್‌ಸಿ ಸದಸ್ಯ ಪ್ರಭುದೇವ್, ಅಕ್ಕ ಅಮೇರಿಕಾ ಸಂಸ್ಥೆಯ ರವಿ, ವಿಶ್ವಾಮಿತ್ರ, ಟಿ.ಸಿ. ನವೀನ್, ತಿಮ್ಮಪ್ಪ, ಕೆಂ.ಬ. ರೇಣುಕಯ್ಯ, ಕೆ.ಎಸ್. ಉಮಾಮಹೇಶ್, ಸಾಂಸ್ಕೃತಿಕ ಸಮಿತಿ ಸಹ ಸಂಚಾಲಕ ಎಂ. ನಂದೀಶ್, ವಸ್ತು ಪ್ರದರ್ಶನ ಸಮಿತಿ ಕಾರ್ಯದರ್ಶಿ ಬಿ. ಗಂಗಾಧರಯ್ಯ ಮತ್ತಿತರರು ಉಪಸ್ಥಿತರಿದ್ದರು.BOX
ಸರ್ಕಾರಿ ಯೋಜನೆಗಳ ಮಾಹಿತಿ ಜನರಿಗೆ ತಲುಪಲಿದೇಶಕ್ಕೆ ಸ್ವಾತಂತ್ರ ಬಂದು ಸುಮಾರು 75ವರ್ಷಗಳು ಕಳೆದರೂ ಇಂದಿಗೂ ಸರ್ಕಾರದ ಸವಲತ್ತುಗಳು ಕಟ್ಟ ಕಡೆಯ ವ್ಯಕ್ತಿಗೆ ತಲುಪುತ್ತಿಲ್ಲ. ಇದರ ಪರಿಣಾಮ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಇದು ಬದಲಾವಣೆಯಾಗಬೇಕಾದರೆ ಇಂತಹ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನಗಳು ಪ್ರತಿ ತಾಲೂಕು ಮಟ್ಟದಲ್ಲಿಯೂ ನಡೆದು, ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿಗಳು ಜನರಿಗೆ ಸುಲಭದಲ್ಲಿ ದೊರೆಯುವಂತಾಗಬೇಕು. ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಸಂಸದ ಜಿ.ಎಸ್. ಬಸವರಾಜು ನುಡಿದರು.
Quoteವಸ್ತುಪ್ರದರ್ಶನಕ್ಕೆ ಬರುವ ರೈತರು, ಜನರಿಗೆ ಪ್ರಾತಕ್ಷಿಕೆಗಳ ಮೂಲಕ ಮಾಹಿತಿ ನೀಡಿ, ಅವರ ಜ್ಞಾನವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಮಾಹಿತಿ ಮತ್ತು ಮನರಂಜನೆ ಒದಗಿಸುವುದು ವಸ್ತುಪ್ರದರ್ಶನದ ಮೂಲ ಉದ್ದೇಶ.
ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ