ಬೆಣ್ಣಿಹಳ್ಳದ ಆರ್ಭಟಕ್ಕೆ ರೈತರ ಬದುಕು ಮೂರಾಬಟ್ಟೆ

| Published : Oct 13 2024, 01:09 AM IST

ಬೆಣ್ಣಿಹಳ್ಳದ ಆರ್ಭಟಕ್ಕೆ ರೈತರ ಬದುಕು ಮೂರಾಬಟ್ಟೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಣ್ಣಿಹಳ್ಳ ಸಾಗುವ ಮಾರ್ಗದಲ್ಲಿ ನೂರಾರು ಹಳ್ಳಿಗಳ ಹೊಲಗಳಿಗೆ ನುಗ್ಗಿ, ಪ್ರತಿ ವರ್ಷ ಬೆಳೆಹಾನಿ ಮಾಡುತ್ತದೆ. ಹೀಗಾಗಿ ಶಿಗ್ಗಾಂವಿ ಸೇರಿದಂತೆ ಕುಂದಗೋಳ ತಾಲೂಕಿನಲ್ಲಿ ಮಳೆ ಶುರುವಾದರೆ ಹಳ್ಳದ ಭಾಗದ ರೈತರಲ್ಲಿ ನಡುಕ ಶುರುವಾಗುತ್ತದೆ.

ಹುಬ್ಬಳ್ಳಿ:

ಕುಂದಗೋಳ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ರಾತ್ರಿ ಸುರಿಯುತ್ತಿರುವ ಮಳೆಯಿಂದಾಗಿ ಬೆಣ್ಣಿಹಳ್ಳ ಉಕ್ಕಿ ಹರಿಯುತ್ತಿದ್ದು, ಸಾವಿರಾರು ಎಕರೆ ಗೋವಿನಜೋಳ ಸೇರಿದಂತೆ ಹತ್ತಾರು ಬೆಳೆ ಹಾನಿ ಮಾಡಿದ್ದು, ರೈತರ ಬದುಕು ಮೂರಾಬಟ್ಟೆ ಮಾಡಿದೆ.

ಕೋಟ್ಯಂತರ ರು. ಬೆಳೆ ಹಾನಿಯಾಗಿದ್ದು, ನಾಡಹಬ್ಬ ದಸರಾ ಸಂಭ್ರಮದಲ್ಲಿದ್ದ ಮೂರ್ನಾಲ್ಕು ತಾಲೂಕಿನ ಹಳ್ಳದ ವ್ಯಾಪ್ತಿಯ ಹೊಲದ ರೈತರಿಗೆ ತೀವ್ರ ಪೆಟ್ಟು ನೀಡಿದೆ.

ಶಿಗ್ಗಾಂವಿ ತಾಲೂಕಿನ ದುಂಡಸಿ ಹೋಬಳಿಯಲ್ಲಿ ಹುಟ್ಟುವ ಈ ಬೆಣ್ಣಿಹಳ್ಳ ಕುಂದಗೋಳ, ನವಲಗುಂದ, ನರಗುಂದ ತಾಲೂಕಿನಲ್ಲಿ ಹರಿದು ಮುಂದೆ ಮಲಪ್ರಭಾ ನದಿಗೆ ಸೇರುತ್ತದೆ. ಹೀಗೆ ಸಾಗುವ ಮಾರ್ಗದಲ್ಲಿ ನೂರಾರು ಹಳ್ಳಿಗಳ ಹೊಲಗಳಿಗೆ ನುಗ್ಗಿ, ಪ್ರತಿ ವರ್ಷ ಬೆಳೆಹಾನಿ ಮಾಡುತ್ತದೆ. ಹೀಗಾಗಿ ಶಿಗ್ಗಾಂವಿ ಸೇರಿದಂತೆ ಕುಂದಗೋಳ ತಾಲೂಕಿನಲ್ಲಿ ಮಳೆ ಶುರುವಾದರೆ ಹಳ್ಳದ ಭಾಗದ ರೈತರಲ್ಲಿ ನಡುಕ ಶುರುವಾಗುತ್ತದೆ.

ಶಿಗ್ಗಾಂವಿ ತಾಲೂಕಿನಲ್ಲಿ ಗುರುವಾರ ರಾತ್ರಿ 10 ಗಂಟೆಯಿಂದ ಆರಂಭವಾದ ಮಳೆ ಬೆಳಗಿನ ಜಾವದ ವರೆಗೂ ಸುರಿದಿದೆ. ಶಿಗ್ಗಾಂವಿ ತಾಲೂಕಿನ ದುಂಡಸಿ ಹೋಬಳಿ ವ್ಯಾಪ್ತಿಯ ಹೊಸೂರು, ತಿಮ್ಮಾಪುರ, ಕುನ್ನೂರು, ಜಿಗಳೂರು, ಕುಂದಗೋಳ ತಾಲೂಕಿನ ದ್ಯಾವನೂರ ಸೇರಿದಂತೆ ಶಿರಗುಪ್ಪಿ ಸೇರಿದಂತೆ ಹಳ್ಳದ ಸುತ್ತಮುತ್ತಲಿನ ಒಂದು ಕಿಲೋ ಮೀಟರ್‌ ವರೆಗೂ ಬೆಣ್ಣೆಹಳ್ಳ ನೀರು ನುಗ್ಗಿದ್ದು, ಹೀಗಾಗಿ ಗೋವಿನಜೋಳ, ಸೋಯಾಬಿನ್‌, ಈರುಳ್ಳಿ, ಬಿಟಿ ಹತ್ತಿ ರಾಶಿಗೆ ಸಜ್ಜಾಗಿದ್ದ ರೈತರಿಗೆ ಬರಸಿಡಿಲು ಎರಗಿದಂತೆ ಆಗಿದೆ.ನವಲಗುಂದ ಅಮರಗೋಳ, ಬೆಳವಟಗಿ, ಯಮನೂರ, ನರಗುಂದ ತಾಲೂಕಿನ ಮೂಗನೂರು, ಬನಹಟ್ಟಿ, ಕೂರ್ಲಗೇರಿ, ಸುರಕೋಡ, ಹದ್ಲಿ, ಗಂಗಾಪುರ, ಖಾನಾಪುರ, ರಡ್ಡೇರನಾಗನೂರ, ಗೋವಿನಜೋಳ, ಬಿಟ್ಟಿ ಹಟ್ಟಿ, ಈರುಳ್ಳಿ, ತೊಗರಿ ಸಂಪೂರ್ಣ ಕೊಚ್ಚಿ ಹೋಗಿವೆ.

ತಿಂಗಳಿನಿಂದ ಮಳೆಯೇ ಬಂದಿರಲಿಲ್ಲ. ರೈತರು ಮಳೆ ಮಳೆ ಅನ್ನುತ್ತಿದ್ದರೂ ವರುಣ ಕೃಪೆ ತೋರಲಿಲ್ಲ. ಈಗ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವುದು ಹಿಂಗಾರಿ ಬೆಳೆಗಳಾದ ಕಡಲೆ, ಜೋಳ, ಗೋಧಿ, ಕುಸುಬಿ ಬಿತ್ತನೆಗೆ ಅನುಕೂಲ ಕಲ್ಪಿಸಿದೆ. ಆದರೆ, ದಿಢೀರ್‌ ಹಳ್ಳಕ್ಕೆ ಪ್ರವಾಹ ಬಂದು ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡಿರುವುದು ತೀವ್ರ ದುಃಖ ತಂದಿದೆ ಎಂದು ನೊಂದು ನುಡಿಯುತ್ತಾರೆ ಶಿರಗುಪ್ಪಿ ಭಾಗದ ರೈತರು.

ಗೋವಿನಜೋಳದ ರಾಶಿ ಮಾಡಲು ಸಜ್ಜಾಗಿದ್ದೇವು. ಮೂರ್ನಾಲ್ಕು ದಿನದಿಂದ ಸುರಿದ ಮಳೆಗೆ ಬೆಣ್ಣೆಹಳ್ಳ ಉಕ್ಕಿ ಹರಿದು ಹೊಲಕ್ಕೆ ನೀರು ನುಗ್ಗಿದೆ. ಪರಿಣಾಮ ಲಕ್ಷಾಂತರ ರು. ಮೌಲ್ಯದ ಗೋವಿನಜೋಳ ನಾಶವಾಗಿದೆ. ಬಿತ್ತನೆ ಸೇರಿದಂತೆ ಬೆಳೆ ಬರುವವರೆಗೂ ಲಕ್ಷಾಂತರ ರು. ಖರ್ಚು ಮಾಡಿದ್ದು, ಇಷ್ಟು ನಷ್ಟ ಸರಿದೂಗಿಸುವುದಾದರೂ ಹೇಗೆ? ಎಂದು ರೈತ ರುದ್ರಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.