ಸಾರಾಂಶ
ಕೊಪ್ಪಳ : ಈಗಾಗಲೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವಂತೆಯೇ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಐಎನ್‌ಡಿಐಎ ಮೈತ್ರಿಕೂಟ ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನೇತಾರರಾದ ರಾಹುಲ್ ಗಾಂಧಿ, ಸೋನಿಯಾಗಾಂಧಿ ಬಡವರ ಮತ್ತು ದೇಶದ ಜನರ ಹಿತಕ್ಕಾಗಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ ಎಂದರು.
ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ಎಂಎಸ್‌ಪಿಗೆ ಕಾನೂನು ಸ್ಥಾನಮಾನ ಹಾಗೂ ದೇಶದ ಅಷ್ಟು ರೈತರು ಮಾಡಿರುವ ಎಲ್ಲ ತರಹದ ಸಾಲಮನ್ನಾ ಮಾಡುವ ಗ್ಯಾರಂಟಿಯೇ ರೈತ ನ್ಯಾಯ ಗ್ಯಾರಂಟಿಯಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಈ ಗ್ಯಾರಂಟಿ ಯೋಜನೆ ಆಶಾ ಭಾವನೆ ಮೂಡಿಸಿದೆ. ಪ್ರತಿಯೊಬ್ಬ ವಿದ್ಯಾವಂತ ಯುವಕನಿಗಾಗಿ ಮೊದಲ ಉದ್ಯೋಗದ ಗ್ಯಾರಂಟಿಯಾಗಿ ₹ 1 ಲಕ್ಷ ವೇತನ ನೀಡಲಾಗುತ್ತದೆ. ಇದು ಯುವ ನ್ಯಾಯ ಗ್ಯಾರಂಟಿಯಾಗಿದೆ ಎಂದರು.ಪ್ರತಿ ಬಡ ಕುಟುಂಬಕ್ಕೆ ಪ್ರತಿ ವರ್ಷ ₹1 ಲಕ್ಷ ನೀಡುವ ಮಹಿಳಾ ನ್ಯಾಯ ಗ್ಯಾರಂಟಿ, ಖಾತ್ರಿ ಯೋಜನೆಯಲ್ಲಿ ಕೂಲಿಯನ್ನು ₹400 ರುಪಾಯಿಗೆ ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದ ವೇಳೆಯಲ್ಲಿ ನಡೆದ ಆರ್ಥಿಕ ಮತ್ತು ಸಮಾಜಿಕ ನ್ಯಾಯ ಗಣತಿ ಪೂರ್ಣಗೊಂಡಿದ್ದರೂ ನಾನಾ ಕಾರಣಗಳಿಂದ ಇನ್ನು ಪ್ರಕಟವಾಗಿಲ್ಲ. ಆದರೆ, ಈಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಐಎನ್ ಡಿಐಎ ಸರ್ಕಾರ ಅಧಿಕಾರಕ್ಕೆ ಬಂದರೇ ದೇಶದಾದ್ಯಂತ ಜಾತಿ ಗಣತಿ ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಡವರು ಸೇರಿದಂತೆ ದೇಶದ ಜನರಿಗೆ ನಯಾ ಪೈಸೆಯ ಅನುಕೂಲವನ್ನು ಈಗಿರುವ ಕೇಂದ್ರ ಸರ್ಕಾರ ಮಾಡಿಲ್ಲ. ಹೀಗಾಗಿ, ಜನರು ಇವರಿಗೆ ಈ ಬಾರಿ ಪಾಠ ಕಲಿಸಲಿದ್ದಾರೆ ಮತದಾರರು ಎಂದರು.
ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಕೃಷ್ಣ ಇಟ್ಟಂಗಿ, ಕಾಟನ್ ಪಾಳಾ, ಕೃಷ್ಣಾರಡ್ಡಿ ಗಲಬಿ, ಗ್ಯಾರಂಟಿ ಜಿಲ್ಲಾ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಇದ್ದರು.