ಸಾರಾಂಶ
ರಬಕವಿ-ಬನಹಟ್ಟಿ: ಸರ್ಕಾರದ ವಿಳಂಬ ಧೋರಣೆಯಿಂದ ರೈತರು ಬೆಳೆದುನಿಂತ ಬೆಳೆಯ ರಕ್ಷಣೆಗೆ ಪರದಾಡುತ್ತಿದ್ದಾರೆ. ಹಾಗಾಗಿ ಶಾಸಕನಾಗಿ ನಾನು ಏತ ನೀರಾವರಿ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ: ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಮೂರು ಬಾರಿ ದಿನಾಂಕ ಮುಂದೂಡಿದ್ದಕ್ಕೆ ವೆಂಕಟೇಶ್ವರ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿ ಪ್ರಾಯೋಗಿಕ ಚಾಲನೆಗೆ ನಾನೇ ಅವಕಾಶ ನೀಡಿದ್ದು ನಿಜ. ಸರ್ಕಾರದ ವಿಳಂಬ ಧೋರಣೆಯಿಂದ ರೈತರು ಬೆಳೆದುನಿಂತ ಬೆಳೆಯ ರಕ್ಷಣೆಗೆ ಪರದಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಸ್ಥಳೀಯ ಶಾಸಕನಾದ ಕಾರಣ ನಾನು ಆ ಕಾರ್ಯ ಮಾಡಿದ್ದೇನೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಸಮರ್ಥಿಸಿಕೊಂಡರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡುವ ವೇಳೆ ಮಾಜಿ ಸಚಿವೆ ಉಮಾಶ್ರೀ ಅವರ ಅವಧಿಯಲ್ಲಿ ಈ ಕಾಮಗಾರಿ ನಡೆದಿದೆ ಎಂದಿದ್ದಕ್ಕೆ ತಿರುಗೇಟು ನೀಡಿದ ಶಾಸಕ ಸಿದ್ದು ಸವದಿ, ಉಮಾಶ್ರೀ ಅವಧಿಯಲ್ಲಿ ಅನುಮೋದನೆ ದೊರಕಿತ್ತು. ವೆಂಕಟೇಶ್ವರ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ನಡೆದಿದೆ ಎಂದು ಹೇಳಿದರು.ನೀಚ ರಾಜಕಾರಣ ಸಲ್ಲದು: ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತಾರದೆ ಕಾಮಗಾರಿಗಳಿಗೆ ಚಾಲನೆ ನೀಡುವ ನೀಚ ರಾಜಕಾರಣವನ್ನು ವಿರೋಧಿಸುತ್ತೇನೆ. ರೈತರ ಒಳಿತಿಗಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧ. ಈಗಿನ ಸರ್ಕಾರ ಅವಾಂತರಗಳಿಗೆ ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ ಎಂದು ಸವದಿ ಮಾರ್ಮಿಕವಾಗಿ ಹೇಳಿದರು.