ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಪಣ್ಯದಹುಂಡಿ ಬಳಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದೆ, ಇದನ್ನು ಸರಿಪಡಿಸಿ ಹೊಸ ಡಿಪಿಆರ್ ಮಾಡಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ರೈತರು, ಸುತ್ತಮುತ್ತಲಿನ ಗ್ರಾಮಸ್ಥರು ಪಣ್ಯದಹುಂಡಿಯಿಂದ ನಗರದ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಪಣ್ಯದಹುಂಡಿ ಬಸ್ ನಿಲ್ದಾಣದಿಂದ ಆರಂಭವಾದ ಪಾದಯಾತ್ರೆಯಲ್ಲಿ ರೈತ ಮುಖಂಡರು, ಮಹಿಳಾ ರೈತರು ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಭಾಗವಹಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ, ರೈಲ್ವೆ ಮೇಲ್ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದ್ದು ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಕೂಡಲೇ ಸಂಬಂಧಪಟ್ಟವರು ಕಾಮಗಾರಿಯನ್ನು ಮರು ಪರಿಶೀಲಿಸಿ ರೈತರ ಹಿತಾಸಕ್ತಿಗೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಪ್ರಸ್ತುತ ಮಾಡಿರುವ ಡಿಪಿಆರ್ ಸರಿ ಇಲ್ಲ. ಕೆಲಸ ಶುರು ಮಾಡಿದ ಮೇಲೆ ಅಂಡರ್ ಪಾಸ್, ಬಸ್ ನಿಲ್ದಾಣ ಮಾಡಿಕೊಡುವ ಭರವಸೆ ಇಲ್ಲ. ರೈತರ ಅನುಕೂಲಕ್ಕಾಗಿ ಅಂಡರ್‌ಪಾಸ್ ನಿರ್ಮಿಸಬೇಕು. ಭೂಸ್ವಾಧೀನಕ್ಕೆ ಸಂಬಂಧಿಸಿದ ಭೂಮಿಯ ಬೆಲೆ ನಿಗದಿಯಲ್ಲಿನ ತಾರತಮ್ಯವನ್ನು ಸರಿಪಡಿಸಿ ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಬಸ್ ಸಂಚರಿಸುವಂತೆ ರೈಲ್ವೆ ಕೆಳ ಸೇತುವೆ ನಿರ್ಮಾಣ ಹಾಗೂ ಪಣ್ಯದಹುಂಡಿ ವೃತ್ತದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮಕೈಗೊಳ್ಳಬೇಕು. ಬಳಿಕ ಕಾಮಗಾರಿಯನ್ನು ಮುಂದುವರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ತನಕ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆಯಲ್ಲಿ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಮೇಲಾಜಿಪುರ ಕುಮಾರ್, ಜೆಡಿಎಸ್ ಮುಖಂಡ ಆಲೂರು ಮಲ್ಲು, ಗ್ರಾಮಸ್ಥರಾದ ನಾಗಪ್ಪ, ಶಿವಮೂರ್ತಿ, ಶಿವಲಿಂಗೇಗೌಡ, ಸಂತೋಷ್, ನಟರಾಜು, ಶಿವಸ್ವಾಮಿ, ರವಿ, ದೇವರಾಜು, ಜಗದೀಶ್ ಸೇರಿದಂತೆ ಇತರರಿದ್ದರು.