ಸರ್ಕಾರ ನಿಗದಿಪಡಿಸಿದ ಬೆಲೆಗೆ ಬೀಜ, ಗೊಬ್ಬರ ಖರೀದಿಸಿ, ಹಗಲಿರುಳು ಬೆವರು ಸುರಿಸಿ ಬೆಳೆ ಬೆಳೆಯುವ ರೈತ ತನ್ನ ಫಸಲಿಗೆ ನ್ಯಾಯಯುತ ಬೆಲೆ ಕೇಳಿದರೆ ತಪ್ಪೇನು? ಜಗತ್ತಿಗೆ ಅನ್ನ ನೀಡುವ ಅನ್ನದಾತರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿ ಬಂದಿರುವುದು ಅತ್ಯಂತ ನೋವಿನ ಸಂಗತಿ.
ಗುತ್ತಲ: ಸರ್ಕಾರ ನಿಗದಿಪಡಿಸಿದ ಬೆಲೆಗೆ ಬೀಜ, ಗೊಬ್ಬರ ಖರೀದಿಸಿ, ಹಗಲಿರುಳು ಬೆವರು ಸುರಿಸಿ ಬೆಳೆ ಬೆಳೆಯುವ ರೈತ ತನ್ನ ಫಸಲಿಗೆ ನ್ಯಾಯಯುತ ಬೆಲೆ ಕೇಳಿದರೆ ತಪ್ಪೇನು? ಜಗತ್ತಿಗೆ ಅನ್ನ ನೀಡುವ ಅನ್ನದಾತರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿ ಬಂದಿರುವುದು ಅತ್ಯಂತ ನೋವಿನ ಸಂಗತಿ. ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು ಎಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ಪಟ್ಟಣದಲ್ಲಿ ಶುಕ್ರವಾರ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುತ್ತಲದಿಂದ ಹುಬ್ಬಳ್ಳಿವರೆಗೆ ಹಮ್ಮಿಕೊಂಡ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿ, ಕೃಷಿಗೆ ಬೇಕಾದ ಪರಿಕರಗಳ ಬೆಲೆ ಏರಿಕೆಯಾದರೂ ಅದಕ್ಕೆ ತಕ್ಕಂತೆ ರೈತನ ಉತ್ಪನ್ನಕ್ಕೆ ಬೆಲೆ ಸಿಗುತ್ತಿಲ್ಲ. ತನ್ನ ಬೆಳೆ ಬೆಳೆಯಲು ಎಷ್ಟು ಖರ್ಚು ಮಾಡಬೇಕು ಎಂಬುದನ್ನು ರೈತ ನಿರ್ಧರಿಸುವುದಿಲ್ಲ. ಆದರೆ, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಪಡೆಯಲು ಮಾತ್ರ ಹೋರಾಟ ಮಾಡಬೇಕಾದ ಸ್ಥಿತಿ ಇದೆ ಎಂದರು.ಗುತ್ತಲ ಕಲ್ಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ, ದೇಶದ ಬೆನ್ನೆಲುಬಾದ ರೈತನ ಬೆನ್ನೆಲುಬನ್ನೇ ಸರ್ಕಾರಗಳು ಮುರಿಯುತ್ತಿರುವುದು ನೋವಿನ ಸಂಗತಿ. ಸರ್ಕಾರ ಶೀಘ್ರವೇ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಅಶೋಕರೆಡ್ಡಿ ಮರಚರೆಡ್ಡೇರ ಮಾತನಾಡಿದರು.ಪಾದಯಾತ್ರೆಯಲ್ಲಿ ಮುತ್ತಣ್ಣ ಯಲಿಗಾರ, ಗೌಡಪ್ಪಗೌಡ ಪಾಟೀಲ್, ಮಾಲತೇಶ ಶೀತಾಳ, ವಿಕಾಸ ಹಿರೇಮಠ, ಜಗದೀಶ ತೋಟಗೇರ, ಹೊನ್ನಪ್ಪ ವಾಲಿಕಾರ, ರಾಕೇಶ ಬ್ಯಾಡಗಿ, ಸಂತೋಷ ಸೊಪ್ಪಿನ, ಸಿ.ಸಿ ತೋಟಗೇರ, ಜಯಪ್ಪಗೌಡ ಹುಳ್ಯಾಳ, ಹನುಮಂತಪ್ಪ ಬಾರ್ಕಿ, ಮಾಲತೇಶ ಬನ್ನಿಮಟ್ಟಿ, ಹಾಲೇಶಪ್ಪ ಮುದ್ದಿ, ಪರಮೇಶ ತೋಟಗೇರ ಸೇರಿದಂತೆ ಬಸಾಪುರ, ಭರಡಿ, ಗುತ್ತಲ, ನೆಗಳೂರ, ಬೆಳವಿಗಿ, ಹಾವನೂರ, ಕಂಚಾರಗಟ್ಟಿ, ಗುಯಿಲಗುಂದಿ ಹಾಗೂ ಗಳಗನಾಥ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನೆಗಳೂರ ಶ್ರೀಗಳು ಹಾಗೂ ಕಲ್ಮಠದ ಶ್ರೀಗಳು ರೈತರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ, ಪಟ್ಟಣದ ಬೀರೇಶ್ವರ ದೇವಸ್ಥಾನದ ಬಳಿ ರೈತರಿಗೆ ಶುಭ ಹಾರೈಸಿ ಬೀಳ್ಕೊಟ್ಟರು. ಬಳಿಕ ಪಾದಯಾತ್ರೆ ಹುಬ್ಬಳ್ಳಿಯತ್ತ ಸಾಗಿತು.