ಕಬ್ಬಿನ ದರ ನಿಗದಿಗಾಗಿ ರೈತರ ಸಭೆ ಇಂದು

| Published : Nov 11 2024, 01:07 AM IST

ಸಾರಾಂಶ

ನ.11ರಂದು ಬೆಳಗ್ಗೆ 11 ಗಂಟೆಗೆ ಕಬ್ಬಿನ ಏಕರೂಪ ದರ ನಿಗದಿ ಮತ್ತು ಬಾಕಿ ಬಿಲ್ಲ ಮಂಜೂರಾತಿಗಾಗಿ ಹೋರಾಟದ ರೂಪರೇಷಗಳನ್ನು ಸಿದ್ಧಪಡಿಸಲು ಬೃಹತ್‌ ಸಭೆ ಕರೆಯಲಾಗಿದೆ

ಕನ್ನಡಪ್ರಭ ವಾರ್ತೆ ಬೀಳಗಿ

ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್‌ ಬಳಿಯಲ್ಲಿನ ಯಲ್ಲಾಲಿಂಗ ದೇವಸ್ಥಾನ ಆವರಣದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಗದಗ ಜಿಲ್ಲೆಗಳ ರೈತ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಬ್ಬು ಬೆಳೆಗಾರರು ಮತ್ತು ರೈತರು ಸೇರಿಕೊಂಡು ನ.11ರಂದು ಬೆಳಗ್ಗೆ 11 ಗಂಟೆಗೆ ಕಬ್ಬಿನ ಏಕರೂಪ ದರ ನಿಗದಿ ಮತ್ತು ಬಾಕಿ ಬಿಲ್ಲ ಮಂಜೂರಾತಿಗಾಗಿ ಹೋರಾಟದ ರೂಪರೇಷಗಳನ್ನು ಸಿದ್ಧಪಡಿಸಲು ಬೃಹತ್‌ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಶೈಲ ನಾಯಕ ತಿಳಿಸಿದರು.

ಇಲ್ಲಿನ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಮಾಡಿ ಕಾರ್ಖಾನೆಗಳನ್ನು ಆರಂಭ ಮಾಡಬೇಕು ಎಂದು ಜಿಲ್ಲಾಕಾರಿಗಳು ಮತ್ತು ಕಾರ್ಖಾನೆ ಮಾಲೀಕರ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಸದ್ಯ ಒಂದೊಂದು ಸಕ್ಕರೆ ಕಾರ್ಖಾನೆ ಒಂದೊಂದು ದರ ನಿಗದಿ ಮಾಡಿ ಕಾರ್ಖಾನೆ ಆರಂಭ ಮಾಡಲಾಗುತ್ತಿದೆ. ಸರ್ಕಾರ ಮತ್ತು ಅಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ಸರಿಯಾದ ಕಡಿವಾಣ ಹಾಕಿಲ್ಲ, ರೈತ ವಿರೋಧಿ ನೀತಿ ಅನುಸರಿಸಿ ಈ ಹಂಗಾಮು ಆರಂಭ ಮಾಡಿದ್ದು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು, ಯಾರು ಕ್ಯಾರೆ ಎನ್ನುತ್ತಿಲ್ಲ. ಅದಕ್ಕಾಗಿ ನಾಲ್ಕು ಜಿಲ್ಲೆಗಳ ರೈತ ಸಂಘಟನೆಗಳ ಪದಾಕಾರಿಗಳು ಸೇರಿಕೊಂಡು ಸಭೆ ಮಾಡಿ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎನ್ನುವುದನ್ನು ತಿರ್ಮಾಣಿಸಿ ಮುಂದಿನ ಹೋರಾಟಕ್ಕಾಗಿ ಸಭೆ ಕರೆಯಲಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಗಂಗಪ್ಪ ಮಾದರ, ಕಾರ್ಯದರ್ಶಿ ಶಿವನಗೌಡ ಪಾಟೀಲ, ಡಿ.ಎಂ ನಧಾಪ್, ಸಿದ್ದರಾಮಯ್ಯ ಮಠಪತಿ, ಗೋವಿಂದಪ್ಪ ಸೊಕನಾದಗಿ, ಬಿ.ಎಸ್.ಗೋನಾಳ, ರಾಜೇದ್ರ ಪಾಟೀಲ, ಬಸವರಾಜ ಹಲಕಿ ಇತರರು ಇದ್ದರು.