ರೈತರೇ ತಪ್ಪದೇ ತಮ್ಮ ರಾಸುಗಳಿಗೆ ವಿಮೆ ಮಾಡಿಸಿ: ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣಗೌಡ

| Published : Jul 10 2024, 12:31 AM IST

ರೈತರೇ ತಪ್ಪದೇ ತಮ್ಮ ರಾಸುಗಳಿಗೆ ವಿಮೆ ಮಾಡಿಸಿ: ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷಾಂತರ ರು. ಕೊಟ್ಟು ಹಸು, ಎಮ್ಮೆಗಳನ್ನು ಖರೀದಿಸಿ ಪೋಷಣೆ ಮಾಡುತ್ತಿದ್ದಾರೆ. ಆದರೆ, ಹವಾಮಾನ ವೈಪರಿತ್ಯ ಹಾಗೂ ಕೆಲವು ರೋಗ ರುಜಿನಗಳಿಗೆ ತುತ್ತಾಗಿ ಲಕ್ಷಾಂತರ ರು. ನಷ್ಟ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಎಲ್ಲಾ ರೈತರಿಗೂ ಮನ್ಮುಲ್‌ನಿಂದ ರಾಸು ವಿಮೆ ಮಾಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜಾನುವಾರುಗಳಿಂದ ಸಂಭವಿಸುವ ಆರ್ಥಿಕ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ರಾಸುವಿಮೆ ಜಾರಿಗೊಳಿಸಿದೆ. ಜಾನುವಾರು ಹೊಂದಿರುವ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು ಎಂದು ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣಗೌಡ ಹೇಳಿದರು.

ತಾಲೂಕಿನ ಸುಖಧರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪ್ರಸಕ್ತ ಸಾಲಿನ ಜಾನುವಾರು ವಿಮೆ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರೈತರು ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಕೆಲವು ರೈತರು ಹೈನುಗಾರಿಕೆಯಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದರು.

ಲಕ್ಷಾಂತರ ರು. ಕೊಟ್ಟು ಹಸು, ಎಮ್ಮೆಗಳನ್ನು ಖರೀದಿಸಿ ಪೋಷಣೆ ಮಾಡುತ್ತಿದ್ದಾರೆ. ಆದರೆ, ಹವಾಮಾನ ವೈಪರಿತ್ಯ ಹಾಗೂ ಕೆಲವು ರೋಗ ರುಜಿನಗಳಿಗೆ ತುತ್ತಾಗಿ ಲಕ್ಷಾಂತರ ರು. ನಷ್ಟ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಎಲ್ಲಾ ರೈತರಿಗೂ ಮನ್ಮುಲ್‌ನಿಂದ ರಾಸು ವಿಮೆ ಮಾಡಿಸಲಾಗುತ್ತಿದೆ. ತಪ್ಪದೆ ಎಲ್ಲಾ ರೈತರು ವಿಮೆ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ರಾಸು ವಿಮೆ ಮಾಡಿಸಿಕೊಂಡರೆ ಅನಾಹುತ ಸಂಭವಿಸಿದಾಗ ಸಾವಿರಾರು ರು. ಹಣವನ್ನು ವಿಮಾ ಕಂಪನಿಯಿಂದ ಪಡೆಯಬಹುದು. ಹೈನುಗಾರರ ಪರವಾಗಿ ಮನ್ಮುಲ್ ಸದಾ ಇರಲಿದೆ. ರೈತರು ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡಬೇಕು ಎಂದರು.

ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಮನ್ಮುಲ್‌ನಿಂದ ವಿಮೆ ಮಾಡಿಸಲಾಗಿದೆ. ಈ ಬಾರಿಯೂ ಕೂಡ 20 ಸಾವಿರಕ್ಕೂ ಅಧಿಕ ರಾಸುಗಳಿಗೆ ವಿಮೆ ಮಾಡಿಸುವ ಗುರಿ ಹೊಂದಿದ್ದೇವೆ ಎಂದರು.

ರಾಸುವಿಮೆ ಹಣ ರೈತರಿಗೆ ಹೊರೆಯಾಗುತ್ತದೆ ಎಂದು ಒಟ್ಟು ವಿಮಾ ವತಿಂಕೆಯ ಶೇ.50 ರಷ್ಟನ್ನು ಮನ್ಮುಲ್ ಪಾವತಿಸುತ್ತಿದ್ದು ಇನ್ನುಳಿದ ಶೇ.50 ರಷ್ಟು ವಿಮೆ ವಂತಿಕೆ ಹಣವನ್ನು ಮಾತ್ರ ರೈತರು ಪಾವತಿಸಿ ರಾಸುವಿಮೆ ಮಾಡಿಸಿಕೊಳ್ಳಬೇಕಿದೆ. ಆದ್ದರಿಂದ ತಾಲೂಕಿನ ಪ್ರತಿಯೊಬ್ಬ ರೈತರು ರಾಸುಗಳಿಗೂ ವಿಮೆ ಮಾಡಿಸಿಕೊಳ್ಳಿ ಎಂದರು.

ಈ ವೇಳೆ ಮನ್ಮುಲ್ ತಾಲೂಕು ವಿಭಾಗೀಯ ಮುಖ್ಯಸ್ಥ ಡಾ.ಸದಾಶಿವ, ಪಶುವೈದ್ಯಾಧಿಕಾರಿ ಡಾ.ಕಿರಣ್, ಡಾ.ಚೈತ್ರ, ಡಾ.ಕೃಷ್ಣಕುಮಾರ್, ಡಾ.ಶಂಕರಯ್ಯ ಹಾಗೂ ಮನ್ಮುಲ್ ವಿಸ್ತರಣಾಧಿಕಾರಿಗಳು ಇದ್ದರು.