ಕೃಷಿಯಲ್ಲಿ ಮಣ್ಣು ಮೂಲಧಾತು. ಅದನ್ನು ನಾವು ನಿರ್ಜೀವಗೊಳಿಸಿದರೆ ಕೃಷಿಯಲ್ಲಿ ಅರ್ಧ ಸೋತಂತೆ
ಕೂಡ್ಲಿಗಿ: ಬಹುತೇಕ ರೈತರು ಬೆಳೆ ಬೆಳೆಸಲು ಮಾತ್ರ ಗಮನ ಕೊಡುತ್ತಾರೆ. ಮಣ್ಣಿನ ಜೀವಂತಿಕೆ ಬಗ್ಗೆ ಕಿಂಚಿತ್ತೂ ಚಿಂತಿಸುವುದಿಲ್ಲ. ಆದರೆ ರೈತರ ಅಸಲಿ ಯಶಸ್ಸು ಮಣ್ಣನ್ನು ಉಳಿಸಿ ಬೆಳೆಸುವುದರಲ್ಲಿದೆ ಎಂದು ಸಾವಯವ ಕೃಷಿಕ ಘಂಟಿ ರಾಘವೇಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರ ವಲಯದ ತಮ್ಮ ಜಮೀನಿನಲ್ಲಿ ಹಸಿರಿನೊಂದಿಗೆ ಮಾತುಕತೆಯ 20 ಕಾರ್ಯಕ್ರಮದ ಆತಿಥ್ಯವಹಿಸಿ ಅವರು ಮಾತನಾಡಿದರು. ಕೃಷಿಯಲ್ಲಿ ಮಣ್ಣು ಮೂಲಧಾತು. ಅದನ್ನು ನಾವು ನಿರ್ಜೀವಗೊಳಿಸಿದರೆ ಕೃಷಿಯಲ್ಲಿ ಅರ್ಧ ಸೋತಂತೆ. ಹೀಗಾಗಿ ಮೊದಲು ಮಣ್ಣಿನ ಸತ್ವ ಸಂರಕ್ಷಿಸಿ, ಹೆಚ್ಚಿಸಬೇಕು. ಅದಕ್ಕಾಗಿ ಸಾವಯವ, ನೈಸರ್ಗಿಕ, ಸಹಜ ಕೃಷಿ ಹಾದಿ ತುಳಿಯಬೇಕು. ನಾನು ದಶಕಗಳ ಕಾಲ ಇದೇ ಮಾದರಿಯ ಕೃಷಿ ಮಾಡಿದ್ದು, ಈಗಲೂ ಮಾಡುತ್ತಿರುವೆ. ಕೃಷಿ ತ್ಯಾಜ್ಯವನ್ನು ಮುಚ್ಚುಗೆ ಆಗಿ, ಮಣ್ಣಿಗೆ ಗೊಬ್ಬರವಾಗಿ ಪರಿವರ್ತಿಸಿರುವೆ. ಗೋ ಸಹಿತ, ರಹಿತ ಸಾವಯವ ಕೃಷಿ ವಿಧಾನವನ್ನು ಅನುಸರಿಸಿ ಅದರಲ್ಲೂ ಸಫಲತೆ ಕಾಣುತ್ತಿರುವೆ. ಮಣ್ಣು ಆರೋಗ್ಯವಾಗಿದ್ದರೆ ಬೆಳೆಗಳೂ ಆರೋಗ್ಯವಾಗಿರುತ್ತವೆ. ಪಂಚ ತರಂಗಣಿ ಪದ್ಧತಿಯ ಕೃಷಿಯಲ್ಲಿ ಅಳವಡಿಸಿಕೊಂಡಿರುವೆ. ಜಮೀನಿನಲ್ಲಿ ಬೆಳೆ ವೈವಿಧ್ಯತೆ ಇದೆ. ಸುಸ್ಥಿರ ಕೃಷಿಯಿಂದ ಈ ಜಮೀನು ಮತ್ತು ನನ್ನ ಬದುಕು ಸಮೃದ್ಧವಾಗಿದೆ ಅಂದರು.ಕೃಷಿ ಕಾರ್ಯಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಮಾತನಾಡಿ, ಇದೊಂದು ಅನೌಪಚಾರಿಕ ಮಾತುಕತೆ. ಕೃಷಿಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಕೃಷಿಯ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮುಕ್ತವಾಗಿದೆ. ಕೃಷಿಕರೇ ಪರಸ್ಪರ ಸಲಹೆ, ಸಹಕಾರ ಹಾಗೆ ವಿಚಾರ ವಿನಿಮಯದಿಂದ ಸುಸ್ಥಿರ ಅಭಿವೃದ್ಧಿ ಹೊಂದಬೇಕು ಎಂಬುದು ಬಳಗದ ಉದ್ದೇಶ ಎಂದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ಮುಖ್ಯಸ್ಥ ಡಾ. ಪಿ.ಆರ್. ಬದರಿ ಪ್ರಸಾದ್ ಮಾತನಾಡಿ, ಕೃಷಿಯಲ್ಲಿ ಜನರಿಗೆ ಸಾಕಷ್ಟು ಒಲವು ಇದೆ. ಆದರೆ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಅದಕ್ಕಾಗಿ ನಮ್ಮ ಕೇಂದ್ರದಲ್ಲಿ `ಒಡಲಾಳ’ ಎಂಬ ವಿನೂತನ ಕಾರ್ಯಕ್ರಮವನ್ನು ರೈತರಿಗಾಗಿಯೇ ಪ್ರತಿ ತಿಂಗಳು ಆಯೋಜಿಸಿ ಮಾರ್ಗದರ್ಶನ ನೀಡಲಿರುವೆ ಎಂದರು.ಸಾವಯವ ಕೃಷಿಕ ಎಚ್.ವಿ. ಸಜ್ಜನ್ ಮಾತನಾಡಿ, ಈ ಜಮೀನು ಮಾದರಿ ಪಟ್ಟಿ ತರಹ ಇದ್ದು, ಇಲ್ಲಿನ ಪ್ರಯೋಗಗಳು ಮತ್ತು ಯಶಸ್ಸು ಕೃಷಿಕರಿಗೆ ಸಿದ್ಧ ಮಾದರಿ ಆಗಿದೆ. ಇವರ ಹಾದಿಯಲ್ಲಿ ಸಾಗಿದರೆ ಕೃಷಿಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಅಂದರು.
ದಾವಣಗೆರೆಯ ಜಬೀವುಲ್ಲಾ ಬಿದಿರು ಬೆಳೆ ಮತ್ತದರ ಮೌಲ್ಯವರ್ಧನೆ ಕುರಿತು, ಶಶಿಧರ ಗುರೂಜಿ ಕೃಷಿ ಕ್ಷೇತ್ರದ ಸವಾಲಿನ ಬಗ್ಗೆ ಮಾತನಾಡಿದರು.ಬಾಳಸಾಹೇಬ ಪಾಟೀಲ್, ಹುಲಿಕೇರಿ ಶರಣಪ್ಪ, ಪೂಜಾರಹಳ್ಳಿ ತಿಪ್ಪೇಸ್ವಾಮಿ, ರೂಬಿ ಮಲ್ಲೇಶ್, ದೂಪದಹಳ್ಳಿ ಮಲ್ಲಿಕಾರ್ಜುನ, ಗಜಾಪುರ ವಿಜಯ್, ಅಮ್ಮನಕೇರಿ ನವೀನ್, ಬಸರಕೋಡು ಒಪ್ಪೊತ್ತೇಶ್ವರ, ಆನೇಕಲ್ಲು ನಾಗರಾಜ್, ನಾಗೇಂದ್ರ ಪ್ರಸಾದ್, ನಿವೃತ್ತ ಅಡಿಷನಲ್ ಎಸ್.ಪಿ. ಮಂಜುನಾಥ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು.
ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ವಿಜಯಪುರ, ದಾವಣಗೆರೆ ಜಿಲ್ಲೆಗಳ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಸಚಿನ್ ಪಾತ್ರೆ, ಯು.ಎಸ್. ಪ್ರಸನ್ನ, ಬಸಯ್ಯಸ್ವಾಮಿ, ಸಿ.ಎಸ್. ಪುರ ನಾಗೇಶ್ವರ, ಸ್ವರೂಪ್ ಕೊಟ್ಟೂರು, ಬಂಡ್ರಿ ಓಬಳೇಶ, ಬಸವರಾಜ್ ಕನಕಗಿರಿ, ಮಾರ್ಗದಪ್ಪ, ಹರಿಶ್ ಕೋರಿ, ರಾಮ ಪ್ರಸಾದ್, ಕೃಷ್ಣ ಪ್ರಸಾದ್, ದೇವರಾಜ್ ಗೋಮಾಳಿ, ಶ್ರೀ ಪ್ರಕಾಶ, ಬಿ.ಎಂ. ಶ್ರೀನಾಥ, ಆಶಾ ಎಸ್., ಸೋಮೇಶ್ ಉಪ್ಪಾರ್, ಭರತ್ ಕುಮಾರ್, ಎಚ್.ಎಸ್. ಕರ್ಣಂ ಮುಂತಾದವರು ಇದ್ದರು.