ರೈತರು ಗುಣಮಟ್ಟದ ಹಾಲು ಪೂರೈಸಿ: ಮನ್ಮುಲ್ ನಿರ್ದೇಶಕ ರಾಮಚಂದ್ರು

| Published : Aug 01 2024, 12:24 AM IST / Updated: Aug 01 2024, 12:25 AM IST

ಸಾರಾಂಶ

ರೈತರು ರಾಸುಗಳನ್ನು ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕು. ಒಕ್ಕೂಟದಿಂದ ದೊರೆಯುವ ವಿಮೆ, ಸಬ್ಸಿಡಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಕಡ್ಡಾಯವಾಗಿ ರಾಸುವಿಮೆ ಹಾಗೂ ಗುಂಪು ವಿಮೆ ಮಾಡಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಸಂಘ ಹಾಗೂ ಒಕ್ಕೂಟದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.

ಪಟ್ಟಣದ ಮನ್ಮುಲ್ ಉಪ ವ್ಯವಸ್ಥಾಪಕರ ಕಚೇರಿಯಲ್ಲಿ ಒಕ್ಕೂಟದಿಂದ ಉತ್ಪಾದಕ ರೈತರಿಗೆ ರೈತಕಲ್ಯಾಣ ಟ್ರಸ್ಟ್, ರಾಸು ಹಾಗೂ ಗುಂಪು ವಿಮೆ ಯೋಜನೆ ಫಲಾನುಭವಿಗಳಿಗೆ ಅಂದಾಜು 25 ಲಕ್ಷ ರು. ಚೆಕ್‌ಗಳನ್ನು ವಿತರಣೆ ಮಾಡಿ ಮಾತನಾಡಿ, ಗುಣಮಟ್ಟದ ಹಾಲು ಪೂರೈಕೆ ಮಾಡಿದರೆ ರೈತರಿಗೆ ಕೈತುಂಬ ಹಣ ಸಿಗುತ್ತದೆ. ಒಕ್ಕೂಟವು ಅಭಿವೃದ್ಧಿ ಹೊಂದಲಿದೆ ಎಂದರು.

ರೈತರು ರಾಸುಗಳನ್ನು ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕು. ಒಕ್ಕೂಟದಿಂದ ದೊರೆಯುವ ವಿಮೆ, ಸಬ್ಸಿಡಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಕಡ್ಡಾಯವಾಗಿ ರಾಸುವಿಮೆ ಹಾಗೂ ಗುಂಪು ವಿಮೆ ಮಾಡಿಸಬೇಕು ಎಂದು ಹೇಳಿದರು.

ಒಕ್ಕೂಟಕ್ಕೆ ನಿತ್ಯ 11 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಹಾಲಿನ ಬೇಡಿಕೆ ಇದ್ದಂತಹ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಹಾಲು ಉತ್ಪಾದನೆ ಹೆಚ್ಚುತ್ತಿರುವುದರಿಂದ ನಮ್ಮ ರಾಜ್ಯದಿಂದ ಪೂರೈಕೆಯಾಗುತ್ತಿದ್ದ ಹಾಲಿಗೆ ಕತ್ತರಿ ಬಿದ್ದಂತಾಗಿದೆ. ಒಕ್ಕೂಟದಲ್ಲಿ ನಿತ್ಯ 3-4 ಲಕ್ಷ ಲೀಟರ್ ಹಾಲು ಉಳಿತಾಯವಾಗುತ್ತಿದೆ. ಇದರಿಂದ ಕೋಟ್ಯಾಂತರ ರು. ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ವೇಳೆ ಅಕಾಲಿಕವಾಗಿ ಮೃತಪಟ್ಟ ರಾಸುಗಳ 46 ಮಂದಿ ಮಾಲೀಕರಿಗೆ ಒಕ್ಕೂಟದಿಂದ 21.50 ಲಕ್ಷ ರು. ವಿಮೆ ಹಣದ ಚೆಕ್, ರೈತ ಕಲ್ಯಾಣ ಟ್ರಸ್ಟ್‌ನಿಂದ 9 ಮಂದಿ ರೈತರಿಗೆ 1.35 ಲಕ್ಷ ರು. ಹಣದ ಚೆಕ್, ಗುಂಪು ವಿಮೆ ಯೋಜನೆಯಡಿ 3 ರೈತರಿಗೆ 1.50 ಲಕ್ಷ ರು. ಹಾಗೂ ವಯೋನಿವೃತ್ತಿ ಹೊಂದಿದ ನಾರಾಯಣಪುರ ಕಾರ್‍ಯದರ್ಶಿ ಎಸ್.ಎನ್.ಶ್ರೀನಿವಾಸ್ ಅವರಿಗೆ 1.50 ಲಕ್ಷ ರು. ನಿವೃತ್ತಿ ಹಣದ ಚೆಕ್‌ನ್ನು ವಿತರಿಸಲಾಯಿತು.

ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿಗಳಾದ ಎನ್.ಎನ್.ಜಗದೀಶ್, ಉಷಾ, ಉಜ್ವಲ್, ನಾಗೇಂದ್ರಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.