ಅಸ್ತಿತ್ವ ಉಳಿಸಿಕೊಳ್ಳಲು ರೈತರು ಸಂಘಟಿತ ಹೋರಾಟ ನಡೆಸಬೇಕು-ರಾಮಣ್ಣ

| Published : Oct 25 2025, 01:00 AM IST

ಅಸ್ತಿತ್ವ ಉಳಿಸಿಕೊಳ್ಳಲು ರೈತರು ಸಂಘಟಿತ ಹೋರಾಟ ನಡೆಸಬೇಕು-ರಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲವಿಲ್ಲದೇ ಕೃಷಿ ನಡೆಸಲು ಸಾಧ್ಯವಿಲ್ಲ, ಸಮಸ್ಯೆಗಳ ಸರಮಾಲೆಯನ್ನೇ ಹೊದ್ದುಕೊಂಡು ಕೃಷಿ ಚಟುವಟಿಕೆ ನಡೆಸಬೇಕಾಗಿದೆ. ನಮ್ಮನ್ನಾಳುವ ಸರ್ಕಾರಗಳು ಆಯಾ ಕಾಲಘಟ್ಟದಲ್ಲಿ ರೈತರ ಶೋಷಣೆ ಮಾಡಿಕೊಂಡು ಬಂದಿವೆ. ಹೀಗಾಗಿ ಸಂಘಟಿತ ಹೋರಾಟಗಳ ಮೂಲಕ ತಮ್ಮ ಅಸ್ತಿತ್ವವನ್ನು ರೈತರು ಉಳಿಸಿಕೊಳ್ಳಬೇಕಾಗಿದೆ. ಜಿಲ್ಲಾ ಹೋರಾಟ ನಡೆಸಬೇಕಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ವಿಷಾದ ವ್ಯಕ್ತಪಡಿಸಿದರು.

ಬ್ಯಾಡಗಿ: ಸಾಲವಿಲ್ಲದೇ ಕೃಷಿ ನಡೆಸಲು ಸಾಧ್ಯವಿಲ್ಲ, ಸಮಸ್ಯೆಗಳ ಸರಮಾಲೆಯನ್ನೇ ಹೊದ್ದುಕೊಂಡು ಕೃಷಿ ಚಟುವಟಿಕೆ ನಡೆಸಬೇಕಾಗಿದೆ. ನಮ್ಮನ್ನಾಳುವ ಸರ್ಕಾರಗಳು ಆಯಾ ಕಾಲಘಟ್ಟದಲ್ಲಿ ರೈತರ ಶೋಷಣೆ ಮಾಡಿಕೊಂಡು ಬಂದಿವೆ. ಹೀಗಾಗಿ ಸಂಘಟಿತ ಹೋರಾಟಗಳ ಮೂಲಕ ತಮ್ಮ ಅಸ್ತಿತ್ವವನ್ನು ರೈತರು ಉಳಿಸಿಕೊಳ್ಳಬೇಕಾಗಿದೆ. ಜಿಲ್ಲಾ ಹೋರಾಟ ನಡೆಸಬೇಕಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ವಿಷಾದ ವ್ಯಕ್ತಪಡಿಸಿದರು.ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮೈಲಾರ ಮಹದೇವಪ್ಪ ಸಭಾಭವನದಲ್ಲಿ ಜರುಗಿದ ಗ್ರಾಮ ಘಟಕದ 14 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಧಕ ರೈತರಿಂದ ಪ್ರಾತ್ಯಕ್ಷಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಉದಾರೀಕರಣ ನೀತಿಯಿಂದ ವಿದೇಶಿ ಕಂಪನಿಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳು ಉದ್ದಿಮೆದಾರರು ರೈತರ ಮೇಲೆ ಬಂಡವಾಳ ಚೆಲ್ಲಿ ದಬ್ಬಾಳಿಕೆ ಮಾಡುತ್ತ, ರೈತ ಕುಲವನ್ನು ವಿನಾಶದ ಅಂಚಿಗೆ ತಳ್ಳುತ್ತಿದ್ದಾರೆ, ರೈತರ ಆರ್ಥಿಕ ಸ್ಥಿತಿಗತಿ ಇಂದಿಗೂ ಸುಧಾರಣೆ ಕಂಡಿಲ್ಲ, ಸರ್ಕಾರದ ಆರ್ಥಿಕ ನೀತಿಗಳು ರೈತರನ್ನು ನೆಲಸಮಗೊಳಿಸಿವೆ, ದೇಶದ ರಾಜಕಾರಣಿಗಳು, ಬಂಡವಾಳಶಾಹಿಗಳು ಅಧಿಕಾರಿಗಳ ಕೈಯಲ್ಲಿ ಸಿಲುಕಿದ್ದು, ಎಲ್ಲರೂ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವ ಹುನ್ನಾರ ನಡೆಸಿದ್ದು ರೈತರು ಇಂದಿನಿಂದಲೇ ಜಾಗೃತರಾಗಬೇಕಾಗಿದೆ ಎಂದರು.

ಕೃಷಿ ಪಂಡಿತ ಪುರಸ್ಕೃತ ಮಲ್ಲೇಶಪ್ಪ ಬಿಸಿರೊಟ್ಟಿ ಮಾತನಾಡಿ, ವಿಷಯುಕ್ತ ಮಣ್ಣಿನಿಂದ ರೈತನಿಗೆ ಬೆಳೆ ಬರಲಾರದೆ ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದು, ನೈಸರ್ಗಿಕ ಕೃಷಿಯತ್ತ ಚಿತ್ತ ಹಾಯಿಸದಿದ್ದಲ್ಲಿ ರೈತ ಸಮುದಾಯ ಇನ್ನಷ್ಟು ತೊಂದರೆಗೆ ಸಿಲುಕಲಿದೆ, ಖಾಸಗಿ ಬೀಜ ಕಂಪನಿ, ರಾಸಾಯನಿಕ ಗೊಬ್ಬರವನ್ನು ಬೆನ್ನುಹತ್ತಿದ ರೈತರು ಸಾಂಪ್ರದಾಯಿಕ ಕೃಷಿಯಿಂದ ವಿಮುಖರಾಗುತ್ತಿದ್ದು, ಮಣ್ಣಿನಲ್ಲಿ ವಿಷ ಬೆರೆಸಿ ತಾನು ಬೆಳೆಯುವ ಬೆಳೆ ಕೂಡ ವಿಷಕಾರಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ರೈತ ಕುಟುಂಬಗಳು ಹಸುಗಳನ್ನು ಕಟ್ಟಬೇಕು ಇದರಿಂದ ಉತ್ಪಾದಿಸುವ ಸೆಗಣಿ, ಗಂಜಲು ರೈತನಿಗೆ ಮೂಲ ಬಂಡವಾಳವಾಗಬೇಕಿದೆ, ಇದರಿಂದ ಹೊಲದಲ್ಲಿ ಲಕ್ಷಾಂತರ ಸೂಕ್ಷಾಣು ಜೀವಿಗಳು ಉತ್ಪಾದಿಸುವ ಗೊಬ್ಬರಗಳಿಂದ ರೋಗ ರಹಿತ ಹಾಗೂ ಖರ್ಚಿಲ್ಲದೆ ಬೆಳೆದು ರೈತರು ಆರ್ಥಿಕವಾಗಿ ಮುನ್ನಡೆ ಸಾಧಿಸಲು ಸಾಧ್ಯವೆಂದರು.ಕೃಷಿ ಪಂಡಿತ ಪುರಸ್ಕೃತ ಚನ್ನಬಸಪ್ಪ ಕೊಂಬಳಿ ಮಾತನಾಡಿ, ದಶಕದ ಹಿಂದೆ ಕಾಕೋಳ ಗ್ರಾಮದ ಸುತ್ತ ತೆರೆದ ಬಾವಿಗಳು ಬತ್ತಿಹೋಗಿ ರೈತರು ಚಿಂತಾಕ್ರಾಂತರಾಗಿದ್ದರು. ಆ ಸಂದರ್ಭ ದಲ್ಲಿ ಊರಿನ ಕೆಲ ಯುವಕರ ತಂಡ ಕಟ್ಟಿಕೊಂಡು ಮಳೆಯಿಂದ ಹರಿದು ವ್ಯರ್ಥವಾಗಿ ಹೋಗುವ ನೀರನ್ನು ಬಾವಿಗಳಿಗೆ ಕಾಲುವೆ ಮೂಲಕ ತುಂಬಿಸಿ ಅಂತರ್ಜಲ ಹೆಚ್ಚಿಸಲು ಸಾಕಷ್ಟು ಶ್ರಮ ಹಾಕಲಾಗಿದೆ. ಪರಿಣಾಮ ಅಂತರ್ಜಲ ಹೆಚ್ಚಿದ್ದು, ಕೆರೆ, ಕಟ್ಟೆ, ಹಳ್ಳ ಕೊಳ್ಳ, ಬಾವಿಗಳಲ್ಲಿ ನೀರು, ಕೆರೆಗಳಲ್ಲಿ ನೀರು ಬರುತ್ತಿವೆ. ಜಲಮೂಲ ಕಾಪಾಡಿಕೊಂಡು ರೈತ ಸಮುದಾಯ ಈಗ ತೋಟ ಹೊಲಗದ್ದೆಗಳಲ್ಲಿ ಭರಪೂರ ಬೆಳೆ ಬೆಳೆಯುತ್ತ ಸಂತಸದಿಂದ ಇದೆ. ನೀರಿನ ಮೂಲಗಳಲ್ಲಿ ರಾಸಾಯನಿಕ ಬಳಕೆಯಿಂದ ವಿಷಯುಕ್ತವಾಗಿದ್ದು, ನೀರು ಸೇವನೆ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಮಾವೇಶದಲ್ಲಿ ರೈತ ಸಂಘದ ಗ್ರಾಮ ಘಟಕದಿಂದ ಇಬ್ಬರು ಕೃಷಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಬಸವರಾಜ ಹಾವೇರಿಮಠ, ವಿ.ಎಚ್. ಗುಡಗೂರು, ಶಿವಬಸಪ್ಪ ಗೋವಿ, ಜಾನ್ ಪುನೀತ, ಅಡಿವೆಪ್ಪ ಆಲದಕಟ್ಟೆ, ಮಹಮದ್‌ಗೌಸ ಪಾಟೀಲ, ದಿಳ್ಳೆಪ್ಪ ಮಣ್ಣೂರು, ಶಂಕರಗೌಡ್ರ ಶಿರಗಂಬಿ, ಶೇಖಪ್ಪ ಕಾಶಿ, ನಿಂಗಪ್ಪ ಮಾಸಣಗಿ, ಮಂಜಣ್ಣ ತೋಟದ, ಡಾ.ಕೆ.ವಿ. ದೊಡ್ಡಗೌಡ್ರ ಇತರರಿದ್ದರು.ಸಗಣಿ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು, ಮಣ್ಣು ಸೇರಿಸಿ ಉಂಡೆ ಕಟ್ಟಿಟ್ಟಾಗ ಅದರಲ್ಲಿ ಸಗಣಿಯಿಂದ ವಿವಿಧ ಹಂತದ ಗೊಬ್ಬರ ಉತ್ಪಾದನೆಯಾಗಲಿದೆ. ಕೋಟಿ ಕೊಟ್ಟರೂ ಸಿಗದ ಸೂಕ್ಷ್ಮಾಣು ಜೀವಿಗಳು ಉತ್ಪಾದನೆಗೊಂಡು ರೈತನ ಮಣ್ಣಿನಲ್ಲಿ ಸೇರಿ ಬೆಳೆಗಳಿಗೆ ಪೂರಕ ಸಹಕಾರ ನೀಡಲಿವೆ ಎನ್ನುವುದನ್ನು ನೆರೆದಿದ್ದ ನೂರಾರು ರೈತರ ಎದುರಲ್ಲಿ ಸಗಣಿ ಕಲಿಸಿ ಪ್ರಾತ್ಯಕ್ಷಿಕೆ ನಡೆಸಲಾಯಿತು.