ಸಾರಾಂಶ
ಕಾಲುಬಾಯಿ ರೋಗ ಸಾಂಕ್ರಾಮಿಕ ರೋಗವಾಗಿದ್ದರೂ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು. ಗುಂಡ್ಲುಪೇಟೆಯಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಾಲುಬಾಯಿ ರೋಗ ಸಾಂಕ್ರಾಮಿಕ ರೋಗವಾಗಿದ್ದರೂ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು. ಪಟ್ಟಣದ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ 6 ನೇ ಸುತ್ತಿನ ಕಾಲು ಬಾಯಿ ಲಸಿಕಾ ಅಭಿಯಾನದಲ್ಲಿ ಗೋಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನಲ್ಲಿ ಈಗಾಗಲೇ ಶೇ.85ರಷ್ಟು ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕಲಾಗಿದೆ. ಉಳಿದ ಜಾನುವಾರುಗಳಿಗೂ ಲಸಿಕೆ ಹಾಕುವ ಮೂಲಕ ಶೇ.100 ರಷ್ಟು ಗುರಿ ಸಾಧಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಚ್.ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಾನುವಾರುಗಳಿಗೆ ಬರುವ ಕಾಲು ಬಾಯಿ ರೋಗಕ್ಕೆ ಲಸಿಕೆಯೊಂದೇ ಪರಿಹಾರ ಎಂದರು.ತಾಲೂಕಿನಲ್ಲಿ ೬ ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಅ.21 ರಿಂದ ನ.20ರ ತನಕ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮೂರು ತಿಂಗಳ ಮೇಲ್ಪಟ್ಟ ಜಾನುವಾರುಗಳ ಕಾಲು ಬಾಯಿ ರೋಗಕ್ಕೆ ಲಸಿಕೆ ನೀಡಲಾಗುತ್ತಿದೆ. ರೈತರು ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಕೊಂಡು ರೋಗ ತಗುಲದಂತೆ ಎಚ್ಚರವಹಿಸಿ ಎಂದು ಮನವಿ ಮಾಡಿದರು. ಪುರಸಭೆ ಅಧ್ಯಕ್ಷ ಅಭಿಯಾನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಎಸ್‌ಆರ್‌ಎಸ್ ರಾಜಶೇಖರ್,ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುತ್ತನಪುರ ರಾಜಶೇಖರ್,ಪಶು ವೈದ್ಯಾಧಿಕಾರಿಗಳ ಡಾ.ಆನಂದರಾಜು,ಕೃಷ್ಣರಾಜು,ನಾಗೇಂದ್ರಸ್ವಾಮಿ ಸೇರಿದಂತೆ ಹಲವರಿದ್ದರು.