ವೈಜ್ಞಾನಿಕ ಕೃಷಿ ಮಾಡುವಲ್ಲಿ ಮಂಡ್ಯ ಜಿಲ್ಲೆಯ ರೈತರು ವಿಫಲ: ಎಚ್.ಎನ್.ನಾಗಮೋಹನ್‌ದಾಸ್

| Published : Dec 09 2024, 12:49 AM IST

ವೈಜ್ಞಾನಿಕ ಕೃಷಿ ಮಾಡುವಲ್ಲಿ ಮಂಡ್ಯ ಜಿಲ್ಲೆಯ ರೈತರು ವಿಫಲ: ಎಚ್.ಎನ್.ನಾಗಮೋಹನ್‌ದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಮಣ್ಣು, ನೀರು, ಗೊಬ್ಬರ ಹಾಗೂ ಬಿತ್ತನೆ ಬೀಜ ಬಳಸುವ ವಿಧಾನವನ್ನು ವೈಜ್ಞಾನಿಕವಾಗಿ ನಮ್ಮ ರೈತರು ಇನ್ನೂ ತಿಳಿದುಕೊಂಡಿಲ್ಲ. ಇದರಿಂದಾಗಿ ನಾವು ಕೃಷಿಯಲ್ಲಿ ಸಾಧನೆ ಮಾಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಾರ್‍ಯಾಗಾರ ನಡೆಸಬೇಕಿದೆ. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ, ಕೃಷಿ ಇಲಾಖೆ ತುರ್ತಾಗಿ ಚಿಂತನೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವೈಜ್ಞಾನಿಕ ಕೃಷಿ ಮಾಡುವಲ್ಲಿ ಜಿಲ್ಲೆ ವಿಫಲವಾಗಿದೆ. ಮಣ್ಣು, ನೀರು, ಯಂತ್ರೋಪಕರಣ, ಬೀಜ, ರಸಗೊಬ್ಬರ ಬಳಕೆ ಸೇರಿದಂತೆ ಕೃಷಿ ಕ್ಷೇತ್ರದ ಬೆಳವಣಿಗೆಗೆ ರಚನಾತ್ಮಕ ಚರ್ಚೆಯ ಅಗತ್ಯತೆ ಇದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಪ್ರತಿಪಾದಿಸಿದರು.

ನಗರದ ಕೆ.ವಿ.ಶಂಕರಗೌಡ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದಿಂದ ಭಾನುವಾರ ಆಯೋಜಿಸಿದ್ದ ಪ್ರಭಾವತಿ ಎಚ್.ಹನುಮೇಗೌಡ ಕಾನೂನು ಸೇವಾ ಪ್ರಶಸ್ತಿ, ಶಾರದಮ್ಮ ಎಂ.ಎಲ್.ಸುಬ್ಬಣ್ಣ ಕೃಷಿ ಪ್ರಶಸ್ತಿ, ವಿಣಾ ಡಾ.ಎಂ.ಮಂಚಯ್ಯ ವೈದ್ಯಕೀಯ ಸೇವಾ ಪ್ರಶಸ್ತಿ, ರತ್ನಮ್ಮ ಕುನ್ನಮರಿಗೌಡ ಕೃಷಿ ಪ್ರಶಸ್ತಿ, ಡಾ.ಸಿ.ಶಿವರಾಮಯ್ಯ ಕೃಷಿ ಪ್ರಶಸ್ತಿ ಹಾಗೂ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ರಮಾನಾಗರಾಜ್ ಚಿತ್ರದುರ್ಗ ಅವರ ಪ್ರಾಯೋಜಿತ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಮಣ್ಣು, ನೀರು, ಗೊಬ್ಬರ ಹಾಗೂ ಬಿತ್ತನೆ ಬೀಜ ಬಳಸುವ ವಿಧಾನವನ್ನು ವೈಜ್ಞಾನಿಕವಾಗಿ ನಮ್ಮ ರೈತರು ಇನ್ನೂ ತಿಳಿದುಕೊಂಡಿಲ್ಲ. ಇದರಿಂದಾಗಿ ನಾವು ಕೃಷಿಯಲ್ಲಿ ಸಾಧನೆ ಮಾಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಾರ್‍ಯಾಗಾರ ನಡೆಸಬೇಕಿದೆ. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ, ಕೃಷಿ ಇಲಾಖೆ ತುರ್ತಾಗಿ ಚಿಂತನೆ ನಡೆಸಬೇಕು ಎಂದರು.

ಮಂಡ್ಯ ಜಿಲ್ಲೆ ಶೈಕ್ಷಣಿಕ, ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಬೆಳೆಯಬೇಕಿದೆ. ಇವೆಲ್ಲ ಬೆಳವಣಿಗೆಗಳನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ಮಂಡ್ಯದ ವಿ.ಸಿ.ಫಾರಂನಲ್ಲಿ ಕೃಷಿಗೆ ಸಂಬಂಧಿಸಿದಂತೆ ಜಪಾನ್ ದೇಶದವರು ಬಂದು ತರಬೇತಿ ನೀಡಿದ್ದರು. ಆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡುತ್ತಿಲ್ಲ ಎಂಬ ಮಾತುಗಳು ಬಂದಿತು. ಈ ಬಗ್ಗೆ ಗಂಭೀರವನಾಗಿ ಚಿಂತನೆ ನಡೆಸಬೇಕಾಗಿದೆ ಎಂದರು.

ಸಂವಿಧಾನದಿಂದ ಮಾತ್ರ ಸಮಸ್ಯೆಗಳ ನಿರ್ಮೂಲನೆ:

ನನಗೆ ಹಲವು ಪ್ರಶಸ್ತಗಳು ಬಂದಿವೆ, ಅದರ ಜೊತೆ ಹಣವೂ ಬಂದಿದೆ. ಇಲ್ಲಿಯತನಕ 10 ಲಕ್ಷಕ್ಕೂ ಹೆಚ್ಚು ಹಣವನ್ನು ಸಂವಿಧಾನದ ಓದಿಗಾಗಿ ಖರ್ಚು ಮಾಡಿದ್ದೇನೆ. ಈಗ ಕೊಡುವ ಹಣವನ್ನು ಸಹ ನಾನು ಸಂವಿಧಾನ ಓದಿಗಾಗಿ ಖರ್ಚು ಮಾಡುವೆ. ಸಂವಿಧಾನವನ್ನು ಎಷ್ಟು ಜನ ಓದಿದ್ದೀರಾ ಅದನ್ನು ಅರ್ಥ ಮಾಡಿಕೊಂಡಿದ್ದೀರಾ ಎಂಬುನ್ನು ಅರಿತುಕೊಳ್ಳಬೇಕು. ದೇಶದಲ್ಲಿ ಸಮಸ್ಯೆಗಳು, ಸವಾಲುಗಳು ಇವೆ, ಇದೆಲ್ಲವನ್ನೂ ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವುದು ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ಶೇ.80ರಷ್ಟು ಅಕ್ಷರಸ್ಥರಿದ್ದರೂ ಕಾನೂನು ಅರಿವಿಲ್ಲ:

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.18ಕ್ಕಿಂತ ಕಡಿಮೆ ಅಕ್ಷರಸ್ಥರು ಇದ್ದರು. ಈಗ ಸರಿಸುಮಾರು ಶೇ.80 ರಷ್ಟು ಅಕ್ಷರಸ್ಥರಿದ್ದರೂ ಇವರೆಲ್ಲರೂ ಕಾನೂನು ಜ್ಞಾನ ಪಡೆದಿಲ್ಲ. ಕಾನೂನು ಗೊತ್ತಿಲ್ಲದೇ ಇರುವುದರಿಂದ ಸಂವಿಧಾನದಲ್ಲಿ ಹೇಳಿರುವ ಹಕ್ಕುಗಳನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ನಾವು ಹಕ್ಕುಗಳನ್ನು ಅನುಭವಿಸುವುದಕ್ಕೆ ಮೊದಲು ಸಂವಿಧಾನದ ಸಾಕ್ಷರತೆ ಮುಖ್ಯವಾಗಿ ಬೇಕಿದೆ ಎಂದರು.

ಕೃಷಿಗೆ ಭವಿಷ್ಯವಿದೆ:

ಕನಕಪುರ ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಕೆ.ಶ್ರೀಕಂಠ ಮಾತನಾಡಿ, ಕೃಷಿಗೆ ಭವಿಷ್ಯವಿಲ್ಲ ಎನ್ನುವ ಜನರೇ ಹೆಚ್ಚಿದ್ದಾರೆ. ಈ ಹಿಂದೆ ಶೇ.80 ರಷ್ಟು ಇದ್ದ ರೈತರು ಪ್ರಸ್ತುತದಲ್ಲಿ ಶೇ.55ಕ್ಕೆ ಕುಸಿದಿದೆ. ನಮ್ಮ ಕೃಷಿಗೆ ಭವಿಷ್ಯವಿದೆ ಎಂಬುದಕ್ಕೆ ಇವರು ದೇಶದ 130 ಕೋಟಿ ಜನರಿಗೆ ಅನ್ನ ನೀಡುತ್ತಿರುವುದೇ ಸಾಕ್ಷಿಯಾಗಿದೆ. ಇದು ಮತ್ತಷ್ಟು ಹೆಚ್ಚಾಗಬೇಕಿದೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ, ಮದ್ದೂರಿನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಲು ಬಂದಾಗ ಸುಮಾರು 12 ಸಾವಿರ ಪ್ರಕರಣಗಳಿದ್ದವು, ಅದರಲ್ಲಿ ರೈತರ ಪ್ರಕರಣಗಳನ್ನು ಸೇರಿದಂತೆ ಹಲವು ಪ್ರಕರಣ ಇತ್ಯರ್ಥಗೊಳಿಸಿರುವ ಸಮಾಧಾನವಿದೆ ಎಂದರು.

ಮದ್ದೂರಿನಿಂದ ವರ್ಗಾವಣೆಗೊಂಡಾಗ ಅಂದಿನ ಕೊನೆಯ ತೀರ್ಪು ನೀಡಿ ಪ್ರಕರಣದಿಂದ ಬಿಡುಗಡೆಗೊಳಿಸಿದ್ದು, ಅಂದಿನ ಶಾಸಕರಾಗಿದ್ದ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರದ್ದಾಗಿತ್ತು. ಜೊತೆಗೆ ಕೇವಲ 12,200 ಪ್ರಕರಣಗಳಲ್ಲಿ ಕೇವಲ 419 ಮಾತ್ರ ಉಳಿಸಿ ಮಿಕ್ಕೆಲ್ಲ ಪ್ರಕರಣ ಇತ್ಯರ್ಥಗೊಳಿಸಿರುವುದು ಹೆಮ್ಮೆ ಎನಿಸಿತ್ತು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಮ.ರಾಮಕೃಷ್ಣ ಅಭಿನಂದನಾ ನುಡಿಯಾಡಿದರು.

ಇದೇ ವೇಳೆ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ (ಕಾನೂನು ಸೇವಾ ಪ್ರಶಸ್ತಿ, 20 ಸಾವಿರ), ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದ ಪ್ರಗತಿಪರ ಕೃಷಿಕ ಚಂದ್ರಶೇಖರ್ (ಕೃಷಿ ಪ್ರಶಸ್ತಿ, 20 ಸಾವಿರ), ಮಂಡ್ಯ ತಾಲೂಕಿನ ದೊಡ್ಡಬಾಣಸವಾಡಿ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಂಬಿಕಾ (ವೈದ್ಯಕೀಯ ಪ್ರಶಸ್ತಿ, 20 ಸಾವಿರ), ಕನಕಪುರ ತಾಲೂಕಿನ ಪ್ರಗತಿಪರ ಕೃಷಿಕ ಬಿ.ಕೆ.ಪದ್ಮಾ (ಕೃಷಿ ಪ್ರಶಸ್ತಿ, 10, ಸಾವಿರ), ಮದ್ದೂರು ತಾಲೂಕಿನ ಚಾಮನಹಳ್ಳಿ ಪ್ರಗತಿಪರ ಕೃಷಿಕ ಪ್ರೊ.ಎಂ.ಸಿ.ಬೋರೇಗೌಡ (ಕೃಷಿ ಪ್ರಶಸ್ತಿ, 10 ಸಾವಿರ) ಹಾಗೂ ಪ್ರಶಸ್ತಿ ಫಲಕ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ವಕೀಲ ಪಿ.ಮಂಜುನಾಥ್ ಹಾಗೂ ಮಂಡ್ಯ ಕಾನೂನು ಕಾಲೇಜಿನ ವಿದ್ಯಾರ್ಥಿ ಜಿ.ಎಸ್.ಚೈತ್ರಾ ಅವರಿಗೆ ತಲಾ 5 ಸಾವಿರದೊಂದಿಗೆ ಫಲಕ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪ್ರಭಾವತಿ ಹನುಮೇಗೌಡ ಕುಟುಂಬದಿಂದ ಎಂ.ಎಸ್.ಹರೀಶ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್, ಕಾರ್ಯದರ್ಶಿ ಹರೀಶ್‌ಕುಮಾರ್ ಭಾಗವಹಿಸಿದ್ದರು.