ಕಿತ್ನಾಮಂಗಲ ಕೆರೆಯ ಫಲವತ್ತಾದ ಮಣ್ಣನ್ನು ಅಂಚೆಪಾಳ್ಯದ ಬಳಿಯ ವಿನರ್ ಬರ್ಗರ್ ಇಟ್ಟಿಗೆ ಕಾರ್ಖಾನೆಗೆ ಸಾಗಿಸಲು ಸ್ಥಳೀಯ ರೈತರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್ ಕಿತ್ನಾಮಂಗಲ ಕೆರೆಯ ಫಲವತ್ತಾದ ಮಣ್ಣನ್ನು ಅಂಚೆಪಾಳ್ಯದ ಬಳಿಯ ವಿನರ್ ಬರ್ಗರ್ ಇಟ್ಟಿಗೆ ಕಾರ್ಖಾನೆಗೆ ಸಾಗಿಸಲು ಸ್ಥಳೀಯ ರೈತರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕಿತ್ನಾಮಂಗಲ ಗ್ರಾಮದ ಕೆರೆಯಿಂದ ಫಲವತ್ತಾದ ಕೆರೆಯ ಗೋಡು ಮಣ್ಣನ್ನು ಜೆಸಿಪಿ ಮತ್ತು ಹಲವಾರು ಟಿಪ್ಪರ್ ಗಳ ಹಾಗೂ ಲಾರಿಗಳಲ್ಲಿ ವಿನರ್ ಬರ್ಗರ್ ಇಟ್ಟಿಗೆ ಕಾರ್ಖಾನೆಗೆ ಅಕ್ರಮವಾಗಿ ರಾತ್ರೊ ರಾತ್ರಿ ಸಾಗಿಸುತ್ತಿರುವ ಆರೋಪ ಕೇಳಿ ಬರುತ್ತಿತ್ತು. ಈ ಘಟನೆಯನ್ನು ರಾತ್ರಿ ವೇಳೆ ಪ್ರಶ್ನಿಸಲು ಹೋದ ಸ್ಥಳಿಯ ರೈತರಿಗೆ ಲಾರಿ ಹತ್ತಿಸುವ ಬೆದರಿಕೆ ಹಾಕಿದ್ದಾರೆ ಎಂದು ಸ್ಥಳೀಯ ರೈತರು ಆರಂಭಿಸಿದರು. ಈ ಘಟನೆಯಿಂದ ಆಕ್ರೋಶಗೊಂಡ ಸುತ್ತಮುತ್ತಲಿನ ಕೃಷಿ ಭೂಮಿಯ ನೂರಾರು ರೈತರು ಕೆರೆ ಆವರಣದಲ್ಲಿ ಮಣ್ಣು ತುಂಬುತ್ತಿದ್ದ ಜೆಸಿಬಿ ಹಾಗೂ ಟಿಪ್ಪರ್ ಗಳನ್ನು ತಡೆದು ಕೆರೆಯಿಂದ ಹೊರಗೆ ಕಳುಹಿಸಲು ಯಶಸ್ವಿಯಾಗಿದ್ದರು. ಈ ವೇಳೆ ಕೆ.ಪಿ.ಸಿ.ಸಿ ಸದಸ್ಯ ಬೇಗೂರು ನಾರಾಯಣ್ ಸ್ಥಳಕ್ಕೆ ಆಗಮಿಸಿ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿಲ್ಲ ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಎಂದು ಪ್ರತಿಭಟನಾಕಾರರನ್ನು ಮನವೊಲಿಸುವ ಯತ್ನ ವಿಫಲವಾಯಿತು ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸ್ಥಳೀಯ ಗ್ರಾಮದ ರೈತರು ಮಾತನಾಡಿ, ನಮ್ಮ ಜಮೀನಿಗೆ ಕೆರೆಯಿಂದ ಮಣ್ಣು ತುಂಬಲು ಹೊದರೆ ಗಲಾಟೆ ಮಾಡುತ್ತಾರೆ ಪೊಲೀಸರು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ತೊಂದರೆ ನೀಡುತ್ತಾರೆ. ಆದರೆ ನಮಗೆ ತಿಳಿಯದಂತೆ ರಾತ್ರಿ ವೇಳೆ ಅಕ್ರಮವಾಗಿ ಪಂಚಾಯ್ತಿಯಲ್ಲಿ ಅನುಮತಿ ಪಡೆಯದೆ ಮಣ್ಣು ತುಂಬುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು ಘಟನಾಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯ್ತಿ ಸದಸ್ಯ ಕುಲುಮೆ ಪಾಳ್ಯದ ಶಿವಣ್ಣ ಮಾತನಾಡಿ ಕೆರೆ ನಿರ್ಮಾಣ ಮಾಡುವಾಗ ಇಲ್ಲಿನ ಸ್ಥಳಿಯರು ನೂರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ. ರೈತರ ಭೂಮಿ ಸೇರಬೇಕಿದ್ದ ಕೆರೆಯ ಫಲವತ್ತಾದ ಮಣ್ಣನ್ನು ಸ್ಥಳಿಯ ಗಮನಕ್ಕೆ ತರದೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇದಕ್ಕೆ ಅನುಮತಿ ಕೊಟ್ಟವರು ಯಾರು? ನಾವು ಯಾವುದೇ ಕಾರಣಕ್ಕೂ ಇಟ್ಟಿಗೆ ಕಾರ್ಖಾನೆಗೆ ಮಣ್ಣು ತುಂಬಲು ಬಿಡುವುದಿಲ್ಲ ಎಂದು ಪ್ರತಿಭಟನೆಗೆ ಮುಂದಾದರು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯ ನಿಯಂತ್ರಣ ಗೊಳಿಸುವಲ್ಲಿ ಯಶಸ್ವಿಯಾಗಿ ನಂತರ ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದರು.