ದಾಬಸ್‍ಪೇಟೆ: ಬೆಂಗಳೂರಿನ 2ನೇ ಹಂತದ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಡೆಸಲು ಬಂದ ಭೂ ಸರ್ವೇ ಕಾರ್ಯಕ್ಕೆ ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಮೋಟಗಾನಹಳ್ಳಿ ಸುತ್ತಮುತ್ತಲ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಸರ್ವೇ ಕಾರ್ಯವನ್ನು ತಡೆದು ನಿಲ್ಲಿಸಿದ್ದಾರೆ.

ಸೋಲೂರು ಹೋಬಳಿ ವ್ಯಾಪ್ತಿಯ ಮೋಟಗಾನಹಳ್ಳಿ, ಕೆಂಪಚಿಕ್ಕನಹಳ್ಳಿ, ಕೋಡಿಹಳ್ಳಿ, ಪೆಮ್ಮನಹಳ್ಳಿ, ದಾಸೇಗೌಡನಪಾಳ್ಯ ಮತ್ತು ಶೆಟ್ಟಿಪಾಳ್ಯ. ಶ್ರೀರಾಮಪುರ ಕಾಲೋನಿ, ಬಸವೇನಹಳ್ಳಿ, ಭಾಗದ ಕೃಷಿ ಜಮೀನುಗಳಲ್ಲಿ ಯಾವುದೇ ಪೂರ್ವ ಮಾಹಿತಿ ನೀಡದೆ ರಹಸ್ಯವಾಗಿ ಸರ್ವೇ ನಡೆಸಲು ಬಂದಿದ್ದ ಸಿಬ್ಬಂದಿಯನ್ನು ರೈತರು ಮತ್ತು ಸಾರ್ವಜನಿಕರು ಒಟ್ಟಾಗಿ ಮುತ್ತಿಗೆ ಹಾಕಿ ವಾಪಸ್ ಕಳುಹಿಸಿದ್ದಾರೆ.

ರೈತರ ವಿರೋಧ: ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಬೆಂಗಳೂರಿನಿಂದ ಬಂದಿದ್ದ ಸರ್ವೇ ಸಿಬ್ಬಂದಿ ಸೋಲೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಡ್ರೋನ್ ಹಾಗೂ ಟೋಟಲ್ ಸ್ಟೇಷನ್ ಯಂತ್ರಗಳ ಮೂಲಕ ಅಳತೆ ಕಾರ್ಯ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ರೈತರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಸರ್ವೇಯನ್ನು ತೀವ್ರವಾಗಿ ವಿರೋಧಿಸಿದರು. ಸರ್ವೇ ಮಾಡಲು ಬಂದಿದ್ದ ಸಿಬ್ಬಂದಿಗೆ ಕನ್ನಡ ಭಾಷೆ ತಿಳಿಯದ ಕಾರಣ ಅವರು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಲು ಮುಂದಾದರು.

ಸರ್ವೆ ಕಾರ್ಯಕ್ಕೆ ಅರ್ಧಕ್ಕೆ ಮೊಡಕು:

ಇದರಿಂದ ಮತ್ತಷ್ಟು ಅಸಮಾಧಾನಗೊಂಡ ರೈತರು ಕೂಡಲೇ ಸರ್ವೇ ನಿಲ್ಲಿಸುವಂತೆ ಒತ್ತಾಯಿಸಿ, ಸಿಬ್ಬಂದಿ ತಂದಿದ್ದ ಡ್ರೋನ್ ಹಾಗೂ ಟೋಟಲ್ ಸ್ಟೇಷನ್ ಉಪಕರಣಗಳನ್ನು ಕಿತ್ತುಕೊಳ್ಳಲು ಯತ್ನಿಸಿದಾಗ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಹೆದರಿದ ಸಿಬ್ಬಂದಿ ತಮ್ಮ ಉಪಕರಣಗಳನ್ನು ತರಾತುರಿಯಲ್ಲಿ ಬಾಕ್ಸ್ ನಲ್ಲಿ ಮುಚ್ಚಿಟ್ಟುಕೊಂಡು ಸರ್ವೇ ಕಾರ್ಯವನ್ನು ಅರ್ಧದಲ್ಲೇ ನಿಲ್ಲಿಸಿ ಬೆಂಗಳೂರಿನತ್ತ ಕಾಲ್ಕಿತ್ತಿದ್ದಾರೆ.


ಈಗಾಗಲೇ ಮೋಟಗಾನಹಳ್ಳಿ, ಕೆಂಪಚಿಕ್ಕನಹಳ್ಳಿ, ಕೋಡಿಹಳ್ಳಿ, ಪೆಮ್ಮನಹಳ್ಳಿ, ದಾಸೆಗೌಡನಪಾಳ್ಯ ಹಾಗೂ ಶೆಟ್ಟಿಪಾಳ್ಯ ಭಾಗದ ಜಮೀನುಗಳಲ್ಲಿ ಚೌಕಾಕಾರದ ಗುರುತುಗಳನ್ನು ಹಾಕಿ (ಜಿಸಿಪಿ43) ಅಳತೆ ಕಾರ್ಯ ನಡೆಸಲಾಗಿದ್ದು, ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ವೆ ಕಾರ್ಯ ನಿಲ್ಲಿಸದಿದ್ದರೆ ಪ್ರತಿಭಟನೆ:

ರಾಜ್ಯ ಸರ್ಕಾರ ರೈತರ ಒಪ್ಪಿಗೆ ಪಡೆದು ಮಾತ್ರ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದಾಗಿ ಹೇಳಿಕೆ ನೀಡುತ್ತಿದ್ದರೂ, ಯಾವುದೇ ಪೂರ್ವ ಮಾಹಿತಿ ನೀಡದೆ ಕೃಷಿ ಜಮೀನು ಹಾಗೂ ತೋಟಗಳಿಗೆ ನುಗ್ಗಿ ರಹಸ್ಯವಾಗಿ ಸರ್ವೇ ನಡೆಸುತ್ತಿರುವುದು ಸರಿಯಲ್ಲ ಎಂದು ಸ್ಥಳೀಯ ರೈತರು ಮತ್ತು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಮತ್ತೆ ನಾಲ್ಕು ಸಾವಿರ ಎಕರೆಗೂ ಹೆಚ್ಚು ಭೂಸ್ವಾಧೀನಕ್ಕೆ ಮುಂದಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವೇ ಮುಂದುವರಿಸಿದರೆ ಮಹಿಳೆಯರು ಕೋಲು, ದೊಣ್ಣೆ ಹಾಗೂ ಪೊರಕೆಗಳೊಂದಿಗೆ ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ರೈತರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೋಟಗಾನಹಳ್ಳಿ ಮತ್ತು ಸೋಲೂರು ಸುತ್ತಮುತ್ತಲಿನ ಭಾಗದಲ್ಲಿ ಸರ್ವೇ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಕೋಟ್ ...............

ಯಾವುದೇ ಪೂರ್ವ ಸೂಚನೆ ನೀಡದೆ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೃಷಿ ಜಮೀನುಗಳಲ್ಲಿ ಈ ರೀತಿ ರಹಸ್ಯವಾಗಿ ಸರ್ವೇ ನಡೆಸುವುದು ಸರಿಯಾದ ಕ್ರಮವಲ್ಲ. ಹಗಲಿರುಳು ಕಷ್ಟಪಟ್ಟು ದುಡಿಯುವ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಿಮಾನ ನಿಲ್ದಾಣದ ಹೆಸರಿನಲ್ಲಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಸರ್ಕಾರದ ಈ ಏಕಪಕ್ಷೀಯ ಧೋರಣೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಇದನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು.

-ಚಿಕ್ಕಹನುಮೇಗೌಡ, ಮಾಲೀಕರು, ಕುಮುದ್ವತಿ ಸಂಸ್ಥೆ

ಕೋಟ್.............

ರೈತರ ಒಪ್ಪಿಗೆಯಿಲ್ಲದೆ ಅವರ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಅನ್ನ ನೀಡುವ ಕೃಷಿ ಭೂಮಿಯನ್ನು ರಕ್ಷಿಸಲು ರೈತರು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಸರ್ಕಾರದ ಈ ಅಕ್ರಮ ಸರ್ವೇ ಮತ್ತು ಬಲವಂತದ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ನಾವು ನ್ಯಾಯಾಲಯದಲ್ಲೂ ಕಾನೂನಾತ್ಮಕವಾಗಿ ಹೋರಾಟ ನಡೆಸಲಿದ್ದೇವೆ. ನಮ್ಮ ಜಮೀನನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.

-ಗಿರೀಶ್, ರೈತ ಮುಖಂಡರು, ವಕೀಲರು

ಪೋಟೋ 1 * 2 * 3 :

ಸೋಲೂರು ಹೋಬಳಿಯ ಮೋಟಗಾನಹಳ್ಳಿ ಸುತ್ತಮುಲ ಹಳ್ಳಿಗಳಲ್ಲಿ 2ನೇ ಹಂತದ ವಿಮಾನ ನಿಲ್ದಾಣ ಸರ್ವೇ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ವರ್ಗದವರು.