ಗೌಡಗೊಂಡನಹಳ್ಳಿಯಲ್ಲಿ ಒತ್ತುವರಿ ತೆರವಿಗೆ ರೈತರ ವಿರೋಧ

| Published : Nov 08 2024, 12:37 AM IST

ಗೌಡಗೊಂಡನಹಳ್ಳಿಯಲ್ಲಿ ಒತ್ತುವರಿ ತೆರವಿಗೆ ರೈತರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿ ಸ.ನಂ ೫೦ ಮತ್ತು ೫೧ರಲ್ಲಿ ಅರಣ್ಯ ಭೂಮಿ ಒತ್ತುವರಿ ಜಾಗವನ್ನು ತೆರವುಗೊಳಿಸಲು ಆಗಮಿಸಿದ್ದ ಜೆಸಿಪಿಗೆ ಕೆಲಸ ನಡೆಯದಂತೆ ರೈತರು ಜೆಸಿಬಿ ಮುಂಭಾಗ ಕುಳಿತು ಪ್ರತಿಭಟಿಸಿದರು.

- ಅಧಿಕಾರಿಗಳ ಜತೆ ವಾಗ್ವಾದ । ಜೆಸಿಬಿಗೆ ಅಡ್ಡ ಕುಳಿತು 20ಕ್ಕೂ ಅಧಿಕ ರೈತರ ಪ್ರತಿಭಟನೆ

- ಎಸಿಎಫ್ ಭಾಗ್ಯಲಕ್ಷ್ಮೀ ನೇತೃತ್ವದಲ್ಲಿ ಆಗಮಿಸಿದ್ದ ೧೫೦ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ

- ಸರ್ಕಾರಿ ಆದೇಶ ಪಾಲನೆಗೆ ಅವಕಾಶ ನೀಡಲು ಅಧಿಕಾರಿಗಳ ಒತ್ತಾಯ, ಸ್ಪಂದಿಸದ ರೈತರು

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಗೌಡಗೊಂಡನಹಳ್ಳಿ ಗ್ರಾಮದ ಸ.ನಂ. ೫೦ ಮತ್ತು ೫೧ರಲ್ಲಿ ಮಂಗಳವಾರ ಅರಣ್ಯ ಭೂಮಿ ಒತ್ತುವರಿ ಜಾಗ ತೆರವುಗೊಳಿಸಲು ಆಗಮಿಸಿದ್ದ ಅರಣ್ಯಾಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದ ನಡೆದಿದ್ದು, ಸದ್ಯಕ್ಕೆ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ.

ಗ್ರಾಮದ ಅರಣ್ಯ ವ್ಯಾಪ್ತಿಯ ಸ.ನಂ ೫೦ ಮತ್ತು ೫೧ರಲ್ಲಿ ಸುಮಾರು ೨೦ಕ್ಕೂ ಹೆಚ್ಚು ರೈತರು ಹಲವಾರು ವರ್ಷಗಳಿಂದಲೂ ಭೂಮಿ ಉಳುಮೆ ಮಾಡುತ್ತಿದ್ದಾರೆ. ಆದರೆ ಇವರೆಲ್ಲ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಇಲಾಖೆ ಕಳೆದೊಂದು ವರ್ಷದಿಂದ ಮೂರು ಬಾರಿ ನೋಟಿಸ್ ನೀಡಿ, ತೆರವಿಗೆ ಸಹಕಾರ ನೀಡಬೇಕು ಎಂದು ತಿಳಿಸಿತ್ತು.

ದಾವಣಗೆರೆ ಅರಣ್ಯ ಇಲಾಖೆಯ ಎಸಿಎಫ್ ಭಾಗ್ಯಲಕ್ಷ್ಮೀ ನೇತೃತ್ವದಲ್ಲಿ ೧೫೦ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ದೌಡಾಯಿಸಿ ತೆರವು ಕಾರ್ಯಾಚರಣೆಗೆ ಮುಂದಾದರು. ಆಗ ಗೌಡಗೊಂಡನಹಳ್ಳಿ ಗ್ರಾಮದ ಸುತ್ತಮುತ್ತಲಿನ ೨೦ಕ್ಕೂ ಹೆಚ್ಚು ರೈತರು ತೆರವು ಕಾರ್ಯಾಚರಣೆಗೆ ಭಾರಿ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ, ಜೆಸಿಬಿ ಯಂತ್ರಗಳಿಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ನಡೆಸಿದರು.

೮೦ ವರ್ಷಗಳಿಂದಲೂ ಈ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶ ಅರಣ್ಯಕ್ಕೆ ಸೇರಿದೆ ಎಂದು ಸುತ್ತಲು ಟ್ರಂಚ್ ಹೊಡೆದು, ಸಸಿಗಳ ನೆಡಲು ಮುಂದಾಗಿದ್ದಾರೆ. ನಮ್ಮ ಭೂಮಿಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ನಮಗೀರುವ ೧ರಿಂದ ೨ ಎಕರೆ ಭೂಮಿ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ, ಸಾಗುವಳಿ ಭೂಮಿ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತರು.

ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ರೈತರು ಉಳುಮೆ ಮಾಡುತ್ತಿರುವ ಭೂಮಿ ಅರಣ್ಯಕ್ಕೆ ಸೇರಿದೆ. ಈ ಸಂಬಂಧ ೨೦೨೩ರಲ್ಲಿ 3 ತಿಂಗಳು ರೈತರಿಗೆ ನೋಟಿಸ್ ನೀಡಲಾಗಿದೆ. ಆದರೆ, ಅಲ್ಲಿಂದಲೂ ಯಾವೊಬ್ಬ ರೈತರು ಒಂದು ದಾಖಲೆಗಳನ್ನು ಒದಗಿಸಿಲ್ಲ. ಹಾಗಾಗಿ, ಸರ್ಕಾರದ ಮತ್ತು ನ್ಯಾಯಾಲಯ ಆದೇಶದ ಮೇರೆಗೆ ಅನಿವಾರ್ಯವಾಗಿ ತೆರವು ಮಾಡಲು ಬಂದಿದ್ದೇವೆ. ಇದಕ್ಕೆ ರೈತರು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು. ಮನವಿಗೆ ಒಪ್ಪದ ರೈತರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು.

ಅರಣ್ಯಾಧಿಕಾರಿಗಳು ಜೆಸಿಬಿ ಯಂತ್ರಗಳಿಂದ ಟ್ರಂಚ್ ಹೊಡೆಯಲು ಮುಂದಾಗುತ್ತಿದ್ದಂತೆ ರೈತರು ಮತ್ತು ರೈತ ಸಂಘದ ಮುಖಂಡರು ಜೆಸಿಬಿ ಮುಂಭಾಗ ಕುಳಿತರು. ಒಂದು ತಲೆಮಾರಿನಿಂದಲೂ ಭೂಮಿ ಬಿತ್ತನೆ ಮಾಡಿ ಬೆಳೆದಿರುವುದು ನಾವು. ಅರಣ್ಯ ಇಲಾಖೆ ಒಂದು ಸಸಿಯನ್ನೂ ನೆಟ್ಟಿಲ್ಲ. ನಿಮ್ಮದೂ ಅನ್ನುವುದಕ್ಕೇ ಏನಿದೆ? ಅನುಭವದಲ್ಲಿ ನಾವಿದ್ದೇವೆ. ಆದರೆ, ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ರೈತರು ವಿಷ ಕುಡಿಯುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಬಲವಂತವಾಗಿ ಗುಂಡಿ ಹೊಡೆಯುವುದಾದರೆ ನಮ್ಮ ಮೇಲೆ ಜೆಸಿಬಿ ಹರಿಸಿ. ವಿಷ ಕುಡಿದು ಪ್ರಾಣ ಬಿಟ್ಟರು ನಾವು ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರು ಎಚ್ಚರಿಸಿದರು.

ಈ ಸಂದರ್ಭ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ೨೦ಕ್ಕೂ ಹೆಚ್ಚು ರೈತರು ಸರ್ಕಾರಿ ಜಮೀನಿನಲ್ಲಿ ಸುಮಾರು ೮೦ ವರ್ಷಗಳಿಂದಲೂ ಭೂಮಿ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಇದರಿಂದ ಜೀವನ ನಿರ್ವಹಣೆ ಮಾಡಿಕೊಂಡು ಕುಟುಂಬ ಸಾಕುತ್ತಿದ್ದಾರೆ. ಆದರ ಅರಣ್ಯ ಇಲಾಖೆಯವರು ದಿಢೀರ್ ಬಂದು ಜಮೀನು ಅರಣ್ಯಕ್ಕೆ ಸೇರಿದೆ ಎಂದು ಹೇಳಿ ತೆರವುಗೊಳಿಸಲು ಬಂದರೆ ಬಡರೈತರ ಗತಿ ಏನು? ಹಾಗಾಗಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಬಲವಂತವಾಗಿ ತೆರವುಗೊಳಿಸಿದರೆ ರೈತರ ಸಾವಿಗೆ ಅಧಿಕಾರಿಗಳೇ ಹೊಣೆಗಾರಿಕೆ ಹೋರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಆಗ ಎಸಿಎಫ್ ಭಾಗ್ಯಲಕ್ಷ್ಮೀ ಮಾತನಾಡಿ, ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವಂತೆ ಸರ್ಕಾರ ಆದೇಶ ಮಾಡಿದೆ. ಹಾಗಾಗಿ ನಮ್ಮ ಕರ್ತವ್ಯ ಮಾಡಲು ಬಂದಿದ್ದೇವೆ. ಕರ್ತವ್ಯ ಮಾಡಲು ಬಿಡದೇ ನಮಗೇ ಅಡ್ಡಿ ಮಾಡುತ್ತಿರುವುದು ಎಷ್ಟು ಸರಿ? ತಾವೂ ಉಳುಮೆ ಮಾಡುತ್ತಿರುವ ಜಮೀನುಗಳ ದಾಖಲೆಗಳನ್ನು ನೀಡಿ, ನಮ್ಮ ಇಲಾಖೆಯಿಂದ ಎಲ್ಲ ದಾಖಲೆಗಳನ್ನು ತಂದಿದ್ದೇವೆ. ಆದ್ದರಿಂದ ಅರಣ್ಯ ಭೂಮಿ ತೆರವು ಕಾರ್ಯಾಚರಣೆಗೆ ಅವಕಾಶ ನೀಡಿ ಎಂದರು.

ತೆರವು ಸಂಬಂಧ ಬೆಳಗ್ಗೆಯಿಂದ ಅಧಿಕಾರಿಗಳು ಮತ್ತು ರೈತರ ನಡುವೆ ಮಾತುಕತೆ ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳದಲ್ಲಿ ಸಿಪಿಐ ಶ್ರೀನಿವಾಸ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್, ವಲಯ ಅರಣ್ಯಾಧಿಕಾರಿಗಳಾದ ಜ್ಯೋತಿ ಮೆಣಸಿನಕಾಯಿ, ರತ್ನಾಕರ್ ಓಬಣ್ಣನವರ್, ಕಿಶೋರ ನಾಯ್ಕ, ಪಿಎಸ್ಐ ಆಶಾ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.