ಸಾರಾಂಶ
ದೊಡ್ಡಬಳ್ಳಾಪುರ: ಅನಿಯಮಿತ ವಿದ್ಯುತ್ ಕಡಿತ, ವಿದ್ಯುತ್ ಪರಿವರ್ತಕಗಳ (ಟಿಸಿ) ದುರಸ್ತಿ ವಿಳಂಬ ಸೇರಿದಂತೆ ವಿದ್ಯುತ್ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ದೊಡ್ಡಬಳ್ಳಾಪುರ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕಿನ ದೊಡ್ಡಬೆಳವಂಗಲ ಬೆಸ್ಕಾಂ ಶಾಖಾ ಕಚೇರಿಯ ಮುಂದೆ ರೈತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸಿ.ಎಚ್.ರಾಮಕೃಷ್ಣಯ್ಯ, ದೊಡ್ಡಬೆಳವಂಗಲ ಹೋಬಳಿ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ದಿನಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಕಡಿತಗೊಳಿಸಲಾಗುತ್ತಿದೆ. ಇದರಿಂದ ರೈತರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ. ಕೆಟ್ಟು ನಿಂತಿರುವ ವಿದ್ಯುತ್ ಪರಿವರ್ತಕಗಳ ದುರಸ್ತಿ ಮಾಡಲು ಲೈನ್‌ಮೆನ್‌ಗಳು ವಿಳಂಬ ಮಾಡುತ್ತಿದ್ದಾರೆ. ನಿರಂತರ ಜ್ಯೋತಿ ಹೆಸರಿಗೆ ಮಾತ್ರ ಇದೆ. ಆದರೆ ವಾಸ್ತದಲ್ಲಿ ಮಾತ್ರ ಜನರು ರಾತ್ರಿ ವೇಳೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಎಂದು ದೂರಿದರು.13 ಫೀಡರ್‌ಗಳಿಗೂ ವಿದ್ಯುತ್ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಸ್ಥಳೀಯ ಸಿಬ್ಬಂದಿ ಕೊರತೆಯಿಂದ ರೈತರಿಗೆ ಸರಬರಾಜು ಆಗುವ ವಿದ್ಯುತ್‌ಗೆ ಕಂಬ ಹಾಗೂ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ವಿಳಂಬ ಮಾಡಲಾಗುತ್ತಿದೆ. ಕಸಾಘಟ್ಟ ಗ್ರಾಮಕ್ಕೆ ಆರು ತಿಂಗಳಿಂದ ವಿದ್ಯುತ್ ಪರಿವರ್ತಕ ನೀಡಿಲ್ಲ. ತರಬನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ವಿದ್ಯುತ್ ಸರಬರಾಜು ಪರಿವರ್ತಕ ಅಳವಡಿಸಿಲ್ಲ ಎಂದು ಆರೋಪಿಸಿದರು.
ನಿರಂತರ ಜ್ಯೋತಿಯಲ್ಲಿ 24 ಗಂಟೆ ವಿದ್ಯುತ್ ನೀಡಬೇಕು. ಹೊಸ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ರೈತರಿಂದ ಭರಿಸಬೇಕು ಎನ್ನುವ ಸರ್ಕಾರದ ನಿಯಮಕ್ಕೆ ನಮ್ಮ ವಿರೋಧವಿದೆ. ಕಡ್ಡಾಯಗೊಳಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ. ದೊಡ್ಡಬೆಳವಂಗಲದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗಳಲ್ಲಿನ ಟಿವಿ, ಪ್ರಿಡ್ಜ್ ಸೇರಿದಂತೆ ಹಲವಾರು ವಿದ್ಯುತ್ ಉಪಕರಣ ಸುಟ್ಟು ಹೋಗಿವೆ. ಇವುಗಳಿಗೆ ಸೂಕ್ತ ಪರಿಹಾರ ನೀಡಬೇಕು. ವಿದ್ಯುತ್ ದುರಸ್ತಿ ನೆಪದಲ್ಲಿ ಕಡಿತಗೊಳಿಸುವ ವಿದ್ಯುತ್ ಅವಧಿಯನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ರಂಗಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ್, ಸದಾಶಿವಮೂರ್ತಿ, ಕುಮಾರ್, ಮುನಿರಾಜು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
28ಕೆಡಿಬಿಪಿ4-ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್, ಪರಿವರ್ತಕಗಳ ದುರಸ್ತಿ ನಿರ್ಲಕ್ಷ್ಯ ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು.;Resize=(128,128))
;Resize=(128,128))
;Resize=(128,128))
;Resize=(128,128))