ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ರೈತರ ಆಕ್ರೋಶ

| Published : Feb 22 2024, 01:52 AM IST

ಸಾರಾಂಶ

ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಸ್ಥಿರ ದೂರವಾಣಿ ಇಲ್ಲ, ಲೈನ್‌ಮ್ಯಾನ್‌ಗಳ ಮೊಬೈಲ್‌ಗಳು ನಾಟ್ ರೀಚಬಲ್ ಆಗಿರುತ್ತವೆ. ವಿದ್ಯುತ್ ಯಾವಾಗ ಕಡಿತಗೊಳಿಸುತ್ತೀರಾ? ಯಾವಾಗ ತ್ರೀ ಫೇಜ್ ವಿದ್ಯುತ್ ನೀಡುತ್ತೀರಾ? ಎಂಬ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ ಎಂದು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ಪಡಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಸ್ಥಿರ ದೂರವಾಣಿ ಇಲ್ಲ, ಲೈನ್‌ಮ್ಯಾನ್‌ಗಳ ಮೊಬೈಲ್‌ಗಳು ನಾಟ್ ರೀಚಬಲ್ ಆಗಿರುತ್ತವೆ. ವಿದ್ಯುತ್ ಯಾವಾಗ ಕಡಿತಗೊಳಿಸುತ್ತೀರಾ? ಯಾವಾಗ ತ್ರೀ ಫೇಜ್ ವಿದ್ಯುತ್ ನೀಡುತ್ತೀರಾ? ಎಂಬ ಬಗ್ಗೆ ಮಾಹಿತಿಯೇ ಇಲ್ಲದಂತಾಗಿದೆ ಎಂದು ರೈತರು ಮೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ಪಡಿಸಿದರು.

ಬುಧವಾರ ಇಲ್ಲಿನ ಗುರುಭವನದಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ರೈತರು ಮಾತನಾಡಿ, ಮನಬಂದಂತೆ ಪವರ್ ಕಟ್ ಮಾಡುತ್ತೀರಾ ? ಎಂದು ರೈತರು ದೂರಿದರು. ತಾಲೂಕು ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ. ಬಸವರಾಜ್ ಮಾತನಾಡಿ, ಹೊಸ ವಿದ್ಯುತ್ ಸಂಪರ್ಕ ಪಡೆಯಲು ಏನೇನು ದಾಖಲಾತಿ ಬೇಕು ಎಂದು ಗ್ರಾಹಕರಿಗೆ ಒಮ್ಮೆಯೇ ಒಂದು ಚೆಕ್‌ ಲಿಸ್ಟ್ ಕೊಡಿ. ಪದೇ, ಪದೇ ದಾಖಲಾತಿಗಳಿಗೆ ವಿನಾಕಾರಣ ಅಲೆದಾಡಿಸಬೇಡಿ. ನಿಮ್ಮ ಇಲಾಖೆ ಯಿಂದ ಅಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಲು ಪರವಾನಗಿ ಪಡೆದ ಗುತ್ತಿಗೆದಾರರ ಮಾಹಿತಿಯನ್ನು ಇಲಾಖೆಯಲ್ಲಿ ಪ್ರಕಟಿಸಬೇಕು. ಇಲಾಖೆ ಕಡತಗಳು ಎಲ್ಲೆಂದರಲ್ಲಿ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಓಡಾಡುತ್ತಿವೆ. ಏಕೆ ಅಧಿಕಾರಿ ಗಳಿಗೇನಾಗಿದೆ ? ಖಾಸಗಿ ವ್ಯಕ್ತಿಗಳ ಕೈಯಲ್ಲಿ ಇಲಾಖೆ ಕಡತಗಳನ್ನು ನೀಡಬಹುದೆಂಬ ಆದೇಶವೇನಾದರೂ ಇದೆಯಾ? ವಿದ್ಯುತ್ ವ್ಯತ್ಯಯದಿಂದಾಗಿ ರೈತರ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಇದಕ್ಕೆ ಯಾರು ಹೊಣೆಗಾರರು ? ಎಂದು ಪ್ರಶ್ನಿಸಿದರು.

ನಿವೃತ್ತ ಯೋಧ ಗಣೇಶ್ ಮಾತನಾಡಿ, ಇದು ಮಕ್ಕಳಿಗೆ ಪರೀಕ್ಷಾ ಸಮಯವಾಗಿದೆ. ಸಂಜೆ ಸರಿಯಾಗಿ 6.30 ರಿಂದ 7.30 ವರೆಗೆ ಪವರ್‌ಕಟ್ ಮಾಡುತ್ತೀರಿ. ಮಕ್ಕಳು ಓದಿಕೊಳ್ಳುವುದಾದರೂ ಹೇಗೆ ? ಕನಿಷ್ಟ ಪರೀಕ್ಷೆ ಸಮಯದ ಒಂದು ತಿಂಗಳಾದರೂ ಪವರ್ ನಿಲ್ಲಿಸಿ ಎಂದರು. ಹಂಚಿನಮನೆ ನಾಗರಾಜ್ ಮಾತನಾಡಿ, ನೀವು ನೀಡುತ್ತಿರುವ ವೋಲ್ಟೇಜ್ ರೈತರ ಪಂಪ್‌ ಸೆಟ್‌ಗಳು ಆನ್ ಆಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ವಿಧ್ಯುತ್ ಪೂರೈಕೆ ಆಗುತ್ತಿಲ್ಲ. ಕಚೇರಿಯಲ್ಲಿ ವಿದ್ಯುತ್ ನಿಲುಗಡೆ ಬಗ್ಗೆ ಮಾಹಿತಿ ನೀಡುವವರೇ ಇಲ್ಲ ಎಂದು ದೂರಿದರು.

ಮೆಸ್ಕಾಂ ಇಲಾಖೆ ಜೆಇ ಸುರೇಶ್ ಮಾತನಾಡಿ, ಸರ್ಕಾರ ನಿಗಧಿಪಡಿಸಿರುವಂತೆ ರೈತರಿಗೆ 7 ಗಂಟೆ ತ್ರೀಫೇಜ್ ವಿದ್ಯುತ್ ನೀಡಲಾಗುತ್ತಿದೆ. ಬೆಳಕು ಯೋಜನೆಯಡಿ ತಾಲೂಕಿನಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಗ್ರಾಹಕರು ಮನೆಯಲ್ಲಾಗಲಿ, ಅಂಗಡಿಗಳಲ್ಲಾಗಲಿ, ಗದ್ದೆಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನೇ ಬಳಸಬೇಕು. ಮನೆಯಲ್ಲಿ ವಿದ್ಯುತ್ ಸಮಸ್ಯೆ ಆದಲ್ಲಿ ತಾವೇ ಸ್ವತಃ ರಿಪೇರಿ ಮಾಡಿಕೊಳ್ಳಲು ಹೋಗ ಬಾರದು. ಸುರಕ್ಷತಾ ದೃಷ್ಟಿಯಿಂದ ಸಂಬಂಧಿಸಿದ ಮೆಸ್ಕಾಂ ಇಲಾಖೆ ಲೈನ್‌ಮ್ಯಾನ್ ಮೂಲಕವೇ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಮೆಸ್ಕಾಂ ಇಲಾಖೆ ಚಿಕ್ಕಮಗಳೂರು ಅಧೀಕ್ಷಕ ಅಭಿಯಂತರರಾದ ಲೋಕೇಶ್ ಮಾತನಾಡಿ, ಈ ಜನ ಸಂಪರ್ಕ ಸಭೆಯಲ್ಲಿ ಚರ್ಚಿಸಿರುವ ಎಲ್ಲಾ ವಿಷಯಗಳ ಬಗ್ಗೆ ಇಲಾಖೆ ಕ್ರಮ ವಹಿಸಲಿದೆ. ಗ್ರಾಹಕ ಸ್ನೇಹಿ ಕೆಲಸಗಳನ್ನು ಮಾಡಲು ಇಲಾಖೆ ಅಗತ್ಯ ಕ್ರಮವಹಿಸುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿಧ್ಯುತ್ ಬಳಕೆದಾರರ ಸಂಘದ ಕಾರ್ಯಾಧ್ಯಕ್ಷ ಮಾಳೂರುದಿಣ್ಣೆ ವಿನಾಯಕ ಮಾತನಾಡಿ, ಕೇವಲ ಸಭೆ ನಡೆದರೆ ಸಾಲದು. ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಅಧಿಕಾರಿಗಳು ತುರ್ತಾಗಿ ಗಮನಹರಿಸಬೇಕು. ರೈತರಿಗೆ ನಾನಾ ಸಮಸ್ಯೆಗಳಿರುತ್ತವೆ. ಈ ಮಧ್ಯೆ ನಮಗೆ ಮೆಸ್ಕಾಂ ಇಲಾಖೆಯದ್ದೇ ದೊಡ್ಡ ಸಮಸ್ಯೆಯಾಗಿದೆ. ಹಿಂದೆ ಅನ್ನದಾತೋ ಸುಖೀ ಭವ ಎನ್ನಲಾಗುತ್ತಿತ್ತು. ಆದರೀಗ ಅದೇ ಅನ್ನದಾತ ಈಗ ಮೆಸ್ಕಾಂ ಇಲಾಖೆ ಉತ್ತಮ ಸೇವೆಗೆ, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಕಾದು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಭೆಯಲ್ಲಿ ರೈತರು ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದರು. ರೈತರು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿಕೊಂಡರು. ಮೆಸ್ಕಾಂ ಇಲಾಖೆಯ ಕೊಪ್ಪ ಇಇ ಸಿದ್ದೇಶ್, ಮುತ್ತಿನಕೊಪ್ಪ ಶಾಖೆಯ ಜೆಇ ಶಶಿಕುಮಾರ್ ಇದ್ದರು.