ಸಾರಾಂಶ
ಮುಧೋಳ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವು ದಿನದಿಂದ ದಿನ ಉಗ್ರ ಸ್ವರೂಪ ತಾಳೂತ್ತಿದೆ. ಸೋಮವಾರ ಮಧ್ಯಾಹ್ನ ಮುಧೋಳ ನಗರದಲ್ಲಿರುವ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಹೋರಾಟಗಾರರು ಹೊರಹಾಕಿ ಕಚೇರಿಗೆ ಬೀಗ ಹಾಕಿಸಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ಮುಧೋಳ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವು ದಿನದಿಂದ ದಿನ ಉಗ್ರ ಸ್ವರೂಪ ತಾಳೂತ್ತಿದೆ. ಸೋಮವಾರ ಮಧ್ಯಾಹ್ನ ಮುಧೋಳ ನಗರದಲ್ಲಿರುವ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಹೋರಾಟಗಾರರು ಹೊರಹಾಕಿ ಕಚೇರಿಗೆ ಬೀಗ ಹಾಕಿಸಿದರು.ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ಹೊರಟ ಹೋರಾಟಗಾರರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುವುದಲ್ಲದೆ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿ ಹೊರಹಾಕಿ ಬೀಗ ಜಡಿದು ಕೆಲಗಂಟೆಗಳವರೆಗೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ತಹಸೀಲ್ದಾರ ಕಚೇರಿಯಿಂದ ಮತ್ತೆ ಸಂಗೊಳ್ಳಿ ರಾಯಣ್ಣ ಸರ್ಕಲ್ ಗೆ ಆಗಮಿಸಿದ ಹೋರಾಟಗಾರರು ಯಥಾಸ್ಥಿತಿ ಧರಣಿ ಸತ್ಯಾಗ್ರಹ ಆರಂಭಿಸಿದರು. ಅಷ್ಟರಲ್ಲೇ ಕುಂದರಗಿ ಹತ್ತಿರದ ಜೆಮ್ ಶುಗರ್ಸ್ ಕಬ್ಬು ನುರಿಸುವ ಕಾರ್ಯಾರಂಭ ಆಗಿರುವ ಸುದ್ದಿ ತಿಳಿದ ಹೋರಾಟಗಾರರು ಆಕ್ರೋಶಗೊಂಡು ಕಬ್ಬಿಗೆ ಬೆಲೆ ಘೋಷಣೆ ಮಾಡದೆ ಕಾರ್ಖಾನೆ ಹೇಗೆ ಆರಂಭಿಸಿದರು, ರೈತರಿಗೆ ಹೇಳಿದಾಗ್ಯೂ ಏಕೆ ಕಬ್ಬು ಪೂರೈಸುತ್ತಿದ್ದಾರೆ. ಇದನ್ನು ತಡೆಯಬೇಕೆಂದು ಹೋರಾಟಗಾರರು ಜೆಮ್ ಕಾರ್ಖಾನೆಗೆ ತೆರಳಿದರು.
ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ₹3500 ಬೆಲೆ ಘೋಷಣೆ ಆಗುವವರೆಗೆ ನಮ್ಮ ಹೋರಾಟ ಎಂದಿನಂತೆ ಮುಂದುವರೆಯಲಿದೆ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಕಾರ್ಖಾನೆಯವರು ಹೋರಾಟ ಸ್ಥಳಕ್ಕೆ ಬಂದು ₹3500 ಕಬ್ಬಿನ ಬೆಲೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಆಗುವ ತೊಂದರೆಗೆ ತಾವು ಕಾರಣೀಕರ್ತರಾಗಬೇಕಾಗುತ್ತದೆ ಎಂದು ಹೋರಾಟಗಾರರು ಸೂಚ್ಯವಾಗಿ ಹೇಳಿದರು.ಹೋರಾಟದಲ್ಲಿ ಮಹಿಳೆಯರು ಕೂಡ ಸಾಥ್ ಕೊಡುತ್ತಿದ್ದಾರೆ. ಎಂದಿನಂತೆ ಬಸ್ ಸಂಚಾರ ಇರುವುದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ, ಅಂಗಡಿ ಮುಂಗಟ್ಟಗಳು ತೆರೆದಿದ್ದರಿಂದ ವ್ಯಾಪಾರ-ವಹಿವಾಟು ಸುಗಮವಾಗಿತ್ತು, ಶಾಲಾ-ಕಾಲೇಜುಗಳು ತರಗತಿಗಳು ಎಂದಿನಂತೆ ನಡೆದಿದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ.
;Resize=(128,128))
;Resize=(128,128))