ಹಾವೇರಿ, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿದಂತೆ ಒಂದೇ ಪಂಪ್ಹೌಸ್ನಿಂದ 150ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದೆ
ಹೂವಿನಹಡಗಲಿ: ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಲ್ಲಿ ರೈತರು ನದಿ ನೀರು ಬಳಸಿ ಭತ್ತ ನಾಟಿ ಮಾಡುವಂತಿಲ್ಲ ಎಂಬ ಜಿಲ್ಲಾಡಳಿತ ಕ್ರಮಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ತಾಲೂಕಿನ ಮಕರಬ್ಬಿ ಗ್ರಾಪಂನಲ್ಲಿ ನಡೆದ ಕ್ರಿಯಾ ಯೋಜನೆ ರೂಪಿಸಲು ಕರೆದಿದ್ದ ಗ್ರಾಮ ಸಭೆಯಲ್ಲಿ ನದಿ ತೀರದ ರೈತರು ತಮ್ಮ ನೋವನ್ನು ತೊಡಿಕೊಳ್ಳುತ್ತಾ ತುಂಗಭದ್ರ ನದಿ ಕೇವಲ ವಿಜಯನಗರ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಈ ಭಾಗದಲ್ಲಿ ಜಿಲ್ಲಾಡಳಿತ ನಿಷೇಧ ಹೇರಿದೆ ಆದರೆ, ಹಾವೇರಿ ಮತ್ತು ಗದಗ ಜಿಲ್ಲಾಡಳಿತ ಈವರೆಗೂ ಯಾವುದೇ ಆದೇಶ ಹೊರಡಿಸಿಲ್ಲ, ಸಾಕಷ್ಟು ರೈತರು ಭತ್ತದ ನಾಟಿ ಮಾಡಲು ಸಸಿ ಬೆಳೆಸುತ್ತಿದ್ದಾರೆ, ಸರ್ಕಾರ ಆದೇಶ ಎಲ್ಲ ಕಡೆಗೂ ಒಂದೇ ರೀತಿಯಲ್ಲಿ ಇರಬೇಕು, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣಿ ಸವರುವ ಕೆಲಸ ಆಗಬಾರದು, ಈ ಅನ್ಯಾಯ ನಾವು ಸಹಿಸುವುದಿಲ್ಲ, ಒಂದು ವೇಳೆ ಹಾವೇರಿ, ಗದಗ ಜಿಲ್ಲೆ ರೈತರು ಭತ್ತದ ನಾಟಿಗೆ ಮುಂದಾದರೇ ನಾವು ಕೂಡಾ ಭತ್ತದ ನಾಟಿ ಮಾಡುತ್ತೇವೆಂದು ಅಧಿಕಾರಿಗಳಿಗೆ ಸವಾಲು ಹಾಕಿದರು.ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಲ್ಲಿ ಬಹು ಗ್ರಾಮ ಕುಡಿವ ನೀರಿನ ಯೋಜನೆ, ಹೂವಿನಹಡಗಲಿ ತಾಲೂಕಿನಲ್ಲಿ ಕಡಿಮೆ ಇವೆ, ಆದರೆ ಹಾವೇರಿ, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿದಂತೆ ಒಂದೇ ಪಂಪ್ಹೌಸ್ನಿಂದ 150ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದೆ. ಮೊದಲು ಆ ಭಾಗಕ್ಕೆ ಕುಡಿವ ನೀರಿನ ಸಮಸ್ಯೆ ಉಂಟಾಗಲಿದೆ. ಇದನ್ನು ಅಧಿಕಾರಿಗಳು ಅರಿತುಕೊಳ್ಳಬೇಕಿದೆ. ಬರಕ್ಕೆ ಕಂಗೆಟ್ಟು ಹೋಗಿದ್ದೇವೆ. ನಮ್ಮ ನೋವನ್ನು ಆಲಿಸುವವರಿಲ್ಲ, ಭತ್ತ ಬೆಳೆಯದಂತೆ ಆದೇಶ ಎಲ್ಲ ಕಡೆಗೂ ಆಗಬೇಕು ಇಲ್ಲದಿದ್ದರೇ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದರು.
ಕೃಷಿ ಕ್ಷೇತ್ರಕ್ಕೆ ನದಿ ನೀರನ್ನು ರೈತರಿಗೆ ನೀಡುತ್ತಿಲ್ಲ, ಇದರ ಜತೆಗೆ ಕೈಗಾರಿಕೆಗಳಿಗೂ ನದಿ ನೀರು ಕೊಡಬಾರದು, ಹಾವೇರಿ, ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡಲೇ ನದಿ ನೀರಿನ ಬಳಕೆ ಬಗ್ಗೆ ಸ್ಪಷ್ಟನೆ ನೀಡಿ ಆದೇಶ ಹೊರಡಿಸಬೇಕು, ಇಲ್ಲವಾದರೇ ವಾರದೊಳಗೆ ವಿಜಯನಗರ ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡುತ್ತೇವೆ ಎಂದು ಮಕರಬ್ಬಿ ಗ್ರಾಮಸ್ಥರು ಹೇಳಿದರು.ಈ ವೇಳೆ ತಾಪಂ ಇಒ ಜಿ. ಪರಮೇಶ್ವರ, ಪಿಡಿಒ ಬಸಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.