ರೈತರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಆರಂಭಿಸಿರುವ ಮೆಕ್ಕೆಜೋಳ ಖರೀದಿ ಕೇಂದ್ರಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ರೈತರು ಹಾವೇರಿ ನಗರದ ಹಾನಗಲ್ಲ ರಸ್ತೆಯ ಎಪಿಎಂಸಿ ಆವರಣದ ಖರೀದಿ ಕೇಂದ್ರಕ್ಕೆ ಮುಗಿಬಿದ್ದು ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ: ರೈತರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಆರಂಭಿಸಿರುವ ಮೆಕ್ಕೆಜೋಳ ಖರೀದಿ ಕೇಂದ್ರಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಮಂಗಳವಾರ ಸಂಜೆ ರೈತರು ನಗರದ ಹಾನಗಲ್ಲ ರಸ್ತೆಯ ಎಪಿಎಂಸಿ ಆವರಣದ ಖರೀದಿ ಕೇಂದ್ರಕ್ಕೆ ಮುಗಿಬಿದ್ದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಜಿಪಿಎಸ್ ಆಧಾರಿತ ಬೆಳೆ ಕ್ಷೇತ್ರದ ಕುರಿತು ಮಾಹಿತಿಯನ್ನು ಗುತ್ತಲ ರಸ್ತೆಯ ಎಪಿಎಂಸಿಯಲ್ಲಿರುವ ಪಿಡಿಪಿಎಸ್ (ಬೆಲೆ ವ್ಯತ್ಯಾಸದ ಪಾವತಿ ಯೋಜನೆ) ಕೇಂದ್ರದಲ್ಲಿ ದಾಖಲಿಸಿ, ಅಲ್ಲಿ ಹೆಬ್ಬೆಟ್ಟು ನೀಡಿ, ದಾಖಲೆ ತರಬೇಕು. ಆನಂತರ ಬೆಳೆಯನ್ನು ಎಪಿಎಂಸಿ ಆವರಣದ ಖರೀದಿ ಕೇಂದ್ರಕ್ಕೆ ತಂದು ಅಲ್ಲಿಯೂ ದಾಖಲೆ ಪತ್ರದ ಸಹಿತ ಲಾರಿಯೊಂದಿಗೆ ಫೋಟೋ ಪ್ರತಿ ಸಲ್ಲಿಸಿ, ಮೆಕ್ಕೆಜೋಳ ಖರೀದಿಗೆ ನೀಡಬೇಕಿದೆ. ಇದು ಅವೈಜ್ಞಾನಿಕ ಎಂಬುದು ರೈತರ ವಾದವಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ಮಾತ್ರ ಮೆಕ್ಕೆಜೋಳ ಖರೀದಿಗೆ ಸರ್ಕಾರ ಸೂಚನೆ ನೀಡಿದೆ. ಅದರ ಆಧಾರದ ಮೇಲೆ ಖರೀದಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಆಗುವ ವಹಿವಾಟಿನ ಧಾರಣೆ ಆಧಾರದ ಮೇಲೆ ರೈತರಿಗೆ ವ್ಯತ್ಯಾಸದ ಮೊತ್ತವನ್ನು ಪಾವತಿಸುವ ಭರವಸೆ ನೀಡಿ, ಪಿಡಿಪಿಎಸ್ (ಬೆಲೆ ವ್ಯತ್ಯಾಸದ ಪಾವತಿ ಯೋಜನೆ) ಆರಂಭಿಸಿದೆ. ಆದರೆ ಇದು ದಾಖಲೆಗೆ ಮಾತ್ರ ಸೀಮಿತ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೆಕ್ಕೆಜೋಳ ಬೆಳೆದ ಬಗ್ಗೆ ಜಿಪಿಎಸ್ ಮಾಡಿಸಬೇಕು, ಅದನ್ನು ತಂದು ಪಿಡಿಪಿಎಸ್ ಅಡಿ ನೋಂದಣಿ ಮಾಡಿಸಿ, ಈ ಹಿಂದೆ ಮಾರಾಟ ಮಾಡಿದ ಮೆಕ್ಕೆಜೋಳದ ರಸೀದಿಯೊಂದಿಗೆ ಮತ್ತೆ ಜಿಪಿಎಸ್ ಮಾಡಿಸಿದ ಆನಂತರ ಖರೀದಿ ಕೇಂದ್ರದಲ್ಲಿ ವ್ಯತ್ಯಾಸದ ಹಣಕ್ಕೆ ದಾಖಲಿಸಬೇಕಿದೆ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಇದೇ ಮಾದರಿ ಅನುಸರಿಸಿ, ಮಾರುಕಟ್ಟೆ ಮದ್ಯಪ್ರವೇಶ ಯೋಜನೆಯಡಿ ವ್ಯತ್ಯಾಸದ ಹಣವನ್ನು ರೈತರಿಗೆ ಗೊಂದಲವಿಲ್ಲದೇ ನೀಡಲಾಗಿದೆ. ಆದರೆ ಈ ಬಾರಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ, ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಬಹುತೇಕ ಶೇ. 65-70ರಷ್ಟು ರೈತರು ತಮ್ಮ ಮೆಕ್ಕೆಜೋಳದ ಬೆಳೆ ಮಾರಾಟ ಮಾಡಿದ್ದಾರೆ. ಆದರೆ ಇದೀಗ ಮಾರಾಟದ ರಸೀದಿ ಕೇಳುತ್ತಿರುವುದು ಮತ್ತು ನೋಂದಾಯಿತ ಖರೀದಿದಾರರೇ ಖರೀದಿಸಿದ ಬಗ್ಗೆ ರಸೀದಿ ಬೇಕೆಂಬ ನಿಯಮ ರೈತರನ್ನು ಕಂಗಾಲಾಗಿದೆ. ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಎಪಿಎಂಸಿ ಆವರಣದಲ್ಲಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಪಿಎಂಸಿ ಕಾರ್ಯದರ್ಶಿ ಜಿ.ಬಿ. ಕಬ್ಬೇರಳ್ಳಿ, ಎಸಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಶರಣಮ್ಮ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಫೆ. 13ರ ವರೆಗೆ ನೋಂದಣಿಗೆ ಅವಕಾಶ: ಪಿಡಿಪಿಎಸ್ ಯೋಜನೆ ನೋಂದಣಿಗೆ ಮೊದಲು ಫೆ. 7 ಗಡುವು ನೀಡಲಾಗಿತ್ತು. ಆನಂತರ ಅದನ್ನು ಫೆ. 13ರ ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇನ್ನೂ ಕೆಲವೇ ದಿನಗಳಿದ್ದಾಗ ನೂರಾರು ರೈತರು ಏಕಕಾಲಕ್ಕೆ ಯೋಜನೆಯಡಿ ನೋಂದಣಿಗೆ ಮುಂದಾಗಿರುವುದು ಕೃಷಿ ಮತ್ತು ಎಪಿಎಂಸಿ ಅಧಿಕಾರಿಗಳಿಗೆ ಸವಾಲಾಗಿದೆ. ಅಲ್ಲದೇ ಯೋಜನೆ ಅನುಷ್ಠಾನದಲ್ಲಿನ ಗೊಂದಲ ನಿವಾರಣೆಗೆ ರೈತರು ಆಗ್ರಹಿಸಿದ್ದಾರೆ.ಹಣಕಾಸಿನ ತೊಂದರೆ ಹಿನ್ನೆಲೆ ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿದ್ದೇವೆ. ಈಗ ನೋಂದಾಯಿತರ ಲೈಸೆನ್ಸ್‌ದಾರರಿಂದ ಖರೀದಿ ರಸೀದಿ ತರಬೇಕು ಎಂಬ ನಿಯಮ ಗೊಂದಲಕ್ಕೆ ಕಾರಣವಾಗಿದೆ. ಕೂಡಲೇ ಇದನ್ನು ಸರಳೀಕರಣ ಮಾಡಬೇಕು. ದಾಖಲೆಗಳ ಹೊಂದಾಣಿಕೆಗೆ ರೈತರನ್ನು ಸಾಕಷ್ಟು ಅಲೆದಾಡಿಸುತ್ತಿದ್ದು, ಇದನ್ನು ತಡೆಯಲು ಮುಂದಾಗಬೇಕು ಎಂದು ಬಸವನಕೊಪ್ಪ ರೈತ ಶರಣಗೌಡ ಹೇಳಿದರು.