ರೈತರ ದುಃಸ್ಥಿತಿಗೆ ಸರ್ಕಾರದ ನಿಯಮಗಳೇ ಕಾರಣ: ಕೃಷಿಕ ಶಿವಮೂರ್ತಿ

| Published : May 20 2024, 01:36 AM IST / Updated: May 20 2024, 12:48 PM IST

ರೈತರ ದುಃಸ್ಥಿತಿಗೆ ಸರ್ಕಾರದ ನಿಯಮಗಳೇ ಕಾರಣ: ಕೃಷಿಕ ಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚವರ್ಣ ಯುವಕ ಮಂಡಲ ಮತ್ತು ಮಹಿಳಾ ಮಂಡಲಗಳ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಯ ೩೫ನೇ ಕಾರ್ಯಕ್ರಮ ನಡೆಯಿತು.

 ಕೋಟ :  ರೈತರ ದುಃಸ್ಥಿತಿಗೆ ಸರ್ಕಾರಗಳ ಅವೈಜ್ಞಾನಿಕ ನಿಯಮಗಳೇ ಕಾರಣವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯನ್ನು ಎಸಿ ಕೋಣೆಯಲ್ಲಿ ಕುಳಿತವರು ನಿರ್ಧರಿಸುವುದರಿಂದ ಈ ಅವಾಂತರಕ್ಕೆ ಕಾರಣರಾಗುತ್ತಿದ್ದಾರೆ ಎಂದು ಕೋಟತಟ್ಟು ಪಡುಕರೆಯ ಹಿರಿಯ ಕೃಷಿಕ ಶಿವಮೂರ್ತಿ ಕೆ. ರೈತ ಸಮುದಾಯದ ನೋವು ವ್ಯಕ್ತಪಡಿಸಿದರು.

ಶನಿವಾರ ಇಲ್ಲಿನ ಪಂಚವರ್ಣ ಯುವಕ ಮಂಡಲ ಮತ್ತು ಮಹಿಳಾ ಮಂಡಲಗಳ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಯ ೩೫ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷಿಕರ, ಹೈನುಗಾರರ ಬವಣೆಯನ್ನು ಆಲಿಸುವವರು ಯಾರೂ ಇಲ್ಲದಾಗಿದೆ, ಕೃಷಿಯನ್ನು ಲಾಭದಾಯಕವಾಗಿಸಲು ಸರ್ಕಾರದಿಂದ ಪೂರಕ ಬೆಲೆ, ವಾತಾವರಣ ಅಗತ್ಯ, ಯುವ ಸಮುದಾಯ ಕೃಷಿ ಚಟುವಟಿಕೆಗಳತ್ತ ಆಕರ್ಷಿಸುವ ಯೋಜನೆಗಳನ್ನು ರೂಪಿಸಬೇಕು. ಆದರೆ ಸರ್ಕಾರ ಹೊಸಹೊಸ ನಿಯಮಗಳ ಮೂಲಕ ಕೃಷಿ, ಹೈನುಗಾರಿಕೆ ಕ್ಷೀಣಿಸುವಂತೆ ಮಾಡುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಮಾಡಬೇಕಾದ ಕಾರ್ಯಕ್ರಮವನ್ನು ಪಂಚವರ್ಣ ಹಾಗೂ ಇತರ ಸಂಸ್ಥೆಗಳು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಪಾರಂಪಳ್ಳಿ ಪರಿಸರದ ಹಿರಿಯ ಕೃಷಿಕರಾದ ರಮೇಶ್ ಹೇರ್ಳೆ ದಂಪತಿಯನ್ನು ಕೃಷಿ ಪರಿಕರ, ಗಿಡ ನೀಡಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಕೃಷಿ ಸಂಘಟನೆಯ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಸಮಗ್ರ ಕೃಷಿ ಪದ್ದತಿಯ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಸಾಲಿಗ್ರಾಮ ಪ.ಪಂ. ಸದಸ್ಯೆ ಅನುಸೂಯ ಹೇರ್ಳೆ, ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ, ಗೆಳೆಯರ ಬಳಗ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಪ್ರಗತಿಪರ ಕೃಷಿಕ ರಘು ಮಧ್ಯಸ್ಥ, ವಿಪ್ರ ಮಹಿಳಾ ಬಳಗದ ಮಾಜಿ ಅಧ್ಯಕ್ಷೆ ಜ್ಞಾನವಿ ಹೇರ್ಳೆ, ಮಹಿಳಾ ವೇದಿಕೆಯ ಭಾರತಿ ಹೇರ್ಳೆ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ನೇಹಕೂಟದ ಅಧ್ಯಕ್ಷೆ ಭಾರತಿ ವಿ. ಮಯ್ಯ ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸನ್ಮಾನಪತ್ರವನ್ನು ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಪಾ ಕೆ. ಹಂದಟ್ಟು ವಾಚಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.