ಹೊಸ ಬೇಸಾಯ ಆಚರಣೆಗೈದ ರೈತರು

| Published : Apr 01 2025, 12:49 AM IST

ಸಾರಾಂಶ

ಶ್ರೀ ವಿಶ್ವಾವಸು ನಾಮ ಸಂವತ್ಸರದ ಯುಗಾದಿಯಂದು ತಾಲೂಕಿನಾಧ್ಯಂತ ಹಲವಾರು ಗ್ರಾಮಗಳಲ್ಲಿ ರೈತರು ಯುಗಾದಿಯ ಹೊಸ ವರ್ಷ ಆರಂಭದ ದಿನದ ಅಂಗವಾಗಿ ಹೊಸ ಬೇಸಾಯ ಸಂಪ್ರದಾಯ ಆಚರಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶ್ರೀ ವಿಶ್ವಾವಸು ನಾಮ ಸಂವತ್ಸರದ ಯುಗಾದಿಯಂದು ತಾಲೂಕಿನಾಧ್ಯಂತ ಹಲವಾರು ಗ್ರಾಮಗಳಲ್ಲಿ ರೈತರು ಯುಗಾದಿಯ ಹೊಸ ವರ್ಷ ಆರಂಭದ ದಿನದ ಅಂಗವಾಗಿ ಹೊಸ ಬೇಸಾಯ ಸಂಪ್ರದಾಯ ಆಚರಿಸಿದರು.

ಹೊಸ ವರ್ಷ ಯುಗಾದಿಯಂದು ಮಾಡುವ ಯಾವುದೇ ಕೆಲಸಗಳ ಫಲಪ್ರದವಾಗುತ್ತವೆ ಎಂಬ ನಂಬಿಕೆ ಹಿಂದೂಗಳಲ್ಲಿ ಇದೆ. ಆದ್ದರಿಂದ ಎಲ್ಲ ರೈತರು ತಮ್ಮ ಜಮೀನುಗಳಲ್ಲಿ ಹೊಸ ಬೇಸಾಯ ಆರಂಭಿಸಿ, ರೈತ ಕಾಯಕಕ್ಕೆ ಮುನ್ನುಡಿ ಹಾಡಿದರು.

ಹೊಸ ಬೇಸಾಯಕ್ಕೂ ಮೊದಲೇ ಎತ್ತುಗಳಿಗೆ ಪೂಜೆ ಮಾಡಿ, ನೈವೇದ್ಯ ಅರ್ಪಿಸಿ, ಇಡೀ ಕುಟುಂಬಸ್ಥರು ಎತ್ತುಗಳಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದರು. ಹೊಲದಲ್ಲಿ ಭೂದೇವಿಗೆ ಪೂಜೆ ಸಲ್ಲಿಸಿ, ಒಂದೆರಡು ಸುತ್ತು ನೇಗಿಲು ಹೊಡೆದು, ಮುಂದಿನ ಕೃಷಿ ಚಟುವಟಿಕೆಗಳಿಗೆ ಪ್ರಥಮ ಹೆಜ್ಜೆಯೆಂಬಂತೆ ಹೊಸ ಬೇಸಾಯ ಪದ್ಧತಿ ನಡೆಸಿದರು.

ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು, ಮಾಸಡಿ, ಅರಕೆರೆ, ನರಸಗೊಂಡನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಹೊಸ ಬೇಸಾಯ ಆಚರಣೆ ನಡೆಯಿತು. ಭಗವಂತ, ಈ ಬಾರಿ ಒಳ್ಳೆಯ ಮಳೆ-ಬೆಳೆ ನೀಡಪ್ಪ ಎಂದು ಪ್ರಾರ್ಥಿಸಿದರು.

- - -

ಕೋಟ್‌ ಯುಗಾದಿ ಹೊಸ ವರ್ಷದ ಅಂಗವಾಗಿ ಕುಟುಂಬದ ಸಮೇತ ಜಮೀನಿಗೆ ಬಂದು ಎತ್ತುಗಳಿಗೆ ಪೂಜೆ ಮಾಡಿದ್ದೇವೆ. ಅವುಗಳಿಗೆ ನೈವೇದ್ಯ ನೀಡಿ, ಹೊಸ ಬೇಸಾಯ ಸಂಪ್ರದಾಯ ಪ್ರಾರಂಭಿಸುವುದು ನಮ್ಮ ವಂಶದ ತಲತಲಾಂತರದಿಂದಲ್ಲೂ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಯುಗಾದಿಯಂದೇ ಬೇಸಾಯ ಪ್ರಾರಂಭಿಸಿದರೆ ಉತ್ತಮ ಮಳೆ-ಬೆಳೆ ಆಗುತ್ತದೆ ಎಂಬ ನಂಬಿಕೆ ನಮ್ಮದು

- ಬಸವರಾಜಪ್ಪ, ರೈತ, ಬೇಲಿಮಲ್ಲೂರು

- - - -31ಎಚ್.ಎಲ್.ಐ2.ಜೆಪಿಜಿ:

ಯುಗಾದಿ ಹೊಸ ವರ್ಷದಂದು ರೈತರು ಎತ್ತುಗಳು, ಭೂತಾಯಿಗೆ ಪೂಜೆ ಸಲ್ಲಿಸಿ ಪ್ರಥಮ ಬೇಸಾಯ ಸಂಪ್ರದಾಯ ನೆರವೇರಿಸುವ ಮೂಲಕ ಮೂಲಕ ಹೊಸ ವರ್ಷದ ರೈತ ಕಾಯಕಕ್ಕೆ ಚಾಲನೆ ನೀಡಿದರು.