ಸಾರಾಂಶ
ಲಕ್ಷ್ಮೇಶ್ವರ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಆರಂಭವಾಗಿದ್ದರಿಂದ ರೈತರು ಮುಂಗಾರು ಬಿತ್ತನೆಗೆ ತಮ್ಮ ಭೂಮಿ ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿತು.
ಲಕ್ಷ್ಮೇಶ್ವರ:ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಆರಂಭವಾಗಿದ್ದರಿಂದ ರೈತರು ಮುಂಗಾರು ಬಿತ್ತನೆಗೆ ತಮ್ಮ ಭೂಮಿ ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿತು.
ಮುಂಗಾರು ಹಂಗಾಮಿನ ಬಿತ್ತನೆಗೆ ಜಮೀನು ರಂಟೆ ಹೊಡೆಯುವುದು, ಗೊಬ್ಬರ ಹಾಕುವುದು, ಭೂಮಿಯ ಹರಗಿ ಕಸ ಕಡ್ಡಿ ತೆಗೆದುಹಾಕಿ ಸ್ವಚ್ಛಗೊಳಿಸುವುದು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ತಾಲೂಕಿನ ಎಲ್ಲೆಡೆ ಕಂಡು ಬರುತ್ತಿದೆ.ಉತ್ತಮ ಮುಂಗಾರು ಪೂರ್ವ ಮಳೆಯಲ್ಲಿ ಕೆಂಪು ಭೂಮಿಯನ್ನು ರಂಟೆ ಹೊಡೆದು ಕಳೆದ ವರ್ಷದ ಕಸದ ಬೀಜಗಳನ್ನು ಭೂಮಿಯ ತಳದಲ್ಲಿ ಹೂತು ಹಾಕುವ ಕಾರ್ಯ ಮಾಡುವ ಮೂಲಕ ಪ್ರಸಕ್ತ ವರ್ಷದಲ್ಲಿ ಹುಲ್ಲು ಹುಟ್ಟದಂತೆ ಮಾಡಿ ಕಳೆಯನ್ನು ಕಡಿಮೆ ಮಾಡುವುದು. ಭೂಮಿಯ ತಳಪದರದ ಮಣ್ಣು ಮೇಲಕ್ಕೆ ತರುವ ಮೂಲಕ ಸೂರ್ಯನ ಬಿಸಿಲಿಗೆ ತೆರದಿಡುವ ಕಾರ್ಯದಿಂದ ಫಲವತ್ತತೆ ಹೆಚ್ಚಿಸುವುದು ರೈತರ ಆದ್ಯತೆ ಕಾರ್ಯವಾಗಿದೆ. ಅಲ್ಲದೆ ಸಗಣಿ ಗೊಬ್ಬರವನ್ನು ಹೊಲದಲ್ಲಿ ಹರಡುವ ಮೂಲಕ ಭೂಮಿಯ ಫಲವವತ್ತತೆ ಹೆಚ್ಚಿಸುವುದು ಹೀಗೆ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಭೂಮಿ ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬಂದಿತು.
ಮುಂಗಾರು ಹಂಗಾಮಿನಲ್ಲಿ ಹೆಸರು, ಗೋವಿನ ಜೋಳ, ಕಂಠಿ ಶೇಂಗಾ, ಯಳ್ಳು, ಬಳ್ಳೊಳ್ಳಿ, ಈರುಳ್ಳಿ, ಹವೀಜ (ಕೊತ್ತಂಬರಿ) ಬಿತ್ತನೆ ಮಾಡುವ ಕಾರ್ಯಕ್ಕೆ ಭೂಮಿ ಹದಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಕಪ್ಪು ಹಾಗೂ ಕೆಂಪು ಮಣ್ಣಿನ ಭೂಮಿಯು ಹೆಚ್ಚಾಗಿದ್ದು, ಮಳೆ ಆಶ್ರಿತ ಜಮೀನು ಹೆಚ್ಚಾಗಿರುವುದು ರೈತರಿಗೆ ಮುಂಗಾರು ಪೂರ್ವ ಮಳೆಗಳು ವರದಾನವಾಗಿರುವ ಎನ್ನುತ್ತಿದೆ ರೈತ ಸಮೂಹ. ಕೋಟ್-ಮುಂಗಾರು ಹಂಗಾಮಿನ ಮಳೆಗಳು ಚೆನ್ನಾಗಿ ಆಗುತ್ತಿರುವುದರಿಂದ ಭೂಮಿಯನ್ನು ಹದಗೊಳಿಸುವ ಕಾರ್ಯ ಸುಲಭವಾಗುತ್ತಿದೆ. ಈ ವರ್ಷ ಮುಂಗಾರು ಮಳೆಗಳು ಚೆನ್ನಾಗಿ ಆಗುತ್ತವೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಭೂಮಿಯನ್ನು ರಂಟೆ ಹೊಡೆದು ಭೂಮಿ ಹದಗೊಳಿಸುವ ಕಾರ್ಯ ಮಾಡುತ್ತಿದ್ದು, ಗೋವಿನ ಜೋಳ ಹಾಗೂ ಶೇಂಗಾ ಬಿತ್ತನೆ ಮಾಡುವ ಗುರಿ ಹಾಕಿಕೊಂಡಿದ್ದೇವೆ.ಮಹಾಂತೇಶ ಗೊಜನೂರ ಲಕ್ಷ್ಮೇಶ್ವರ ಪಟ್ಟಣದ ರೈತ