ಸಾರಾಂಶ
ರೈತರು ಸಾಮಾನ್ಯವಾಗಿ ಕೃಷಿ, ಕಂದಾಯ ಇಲಾಖೆ ಸಂಬಂಧಿಸಿದಂತೆ ಬಹುತೇಕ ಅರ್ಜಿ ಸಲ್ಲಿಸುತ್ತಾರೆ. ಅವರುಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆ ಪರಿಹರಿಸಿಕೊಳ್ಳಬೇಕು. ರೈತರು ತಮ್ಮ ಯಾವುದೇ ಸಮಸ್ಯೆಗಳನ್ನು ಹೇಳಿಕೊಂಡು ಸರ್ಕಾರಿ ಕಚೇರಿಗಳಿಗೆ ಬಂದರೆ ಅಧಿಕಾರಿಗಳಾಗಲಿ, ಸಿಬ್ಬಂದಿ ಅಸಡ್ಡೆ ತೋರದೆ ಅವರ ಕೆಲಸ ಮಾಡಿಕೊಡಬೇಕು.
ಕನ್ನಡಪ್ರಭ ವಾರ್ತೆ ಭಾರತೀನಗರ
ರೈತರು ತಮ್ಮ ಯಾವುದೇ ಸಮಸ್ಯೆಗಳನ್ನು ಹೇಳಿಕೊಂಡು ಸರ್ಕಾರಿ ಕಚೇರಿಗಳಿಗೆ ಬಂದರೆ ಅಧಿಕಾರಿಗಳಾಗಲಿ, ಸಿಬ್ಬಂದಿ ಅಸಡ್ಡೆ ತೋರದೆ ಅವರ ಕೆಲಸ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡ ಸೂಚಿಸಿದರು.ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಸಾಮಾನ್ಯವಾಗಿ ಕೃಷಿ, ಕಂದಾಯ ಇಲಾಖೆ ಸಂಬಂಧಿಸಿದಂತೆ ಬಹುತೇಕ ಅರ್ಜಿ ಸಲ್ಲಿಸುತ್ತಾರೆ. ಅವರುಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ಅಧಿಕಾರಿಗಳಿಂದ ಮಾತ್ರ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ಅಧಿಕಾರಿಗಳೊಂದಿಗೆ ಕೈ ಜೋಡಿಸಿ ತಮ್ಮ ಸಮಸ್ಯೆ ಹೇಳಿಕೊಂಡಾಗ ಮಾತ್ರ ಬಗೆಹರಿಸಲು ಸಾಧ್ಯ ಎಂದರು.ರೈತರ ಸಮಸ್ಯೆಯ ಅರ್ಜಿಗಳನ್ನು ಸ್ವೀಕರಿಸುವುದು ಮುಖ್ಯವಲ್ಲ. ಅದನ್ನು ತ್ವರಿತಗತಿಯಲ್ಲಿ ಕೆಲಸ ಮಾಡಿಸಿಕೊಡುವುದು ಮುಖ್ಯ. ರೈತರಿಗೆ ವಿದ್ಯುತ್ ಟ್ರ್ಯಾನ್ಸ್‌ಫಾರ್ಮರ್ ಸಮಸ್ಯೆ ಎದುರಾಗಿದ್ದರೆ, ತಕ್ಷಣ ಹೊಸ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಿದರೆ ಬೋರ್ ವೆಲ್ ನೀರಿನಿಂದ ತಮ್ಮ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಾರೆ ಎಂದರು.
ಸಾರ್ವಜನಿಕರಿಂದ ಅರ್ಜಿ ತೆಗೆದುಕೊಳ್ಳುವುದಕ್ಕೆ ಮಾತ್ರ ಈ ಜನಸ್ಪಂದನಾ ಕಾರ್ಯಕ್ರಮ ಸೀಮಿತವಾಗಬಾರದು. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದೆ. ಜನರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಲು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು.ರೈತಸಂಘದಿಂದ ಮನವಿ ಸಲ್ಲಿಕೆ:
ಇದೇ ವೇಳೆ ರಾಜ್ಯ ರೈತಸಂಘದ ಕಾರ್ಯಕರ್ತರು ಕೆರೆಕಟ್ಟೆಗಳಿಗೆ ಕೂಡಲೇ ನೀರು ತುಂಬಿಸುವುದು, ಬೆಳೆ ಪರಿಹಾರ ವಿತರಣೆ, ಕೆ.ಎಂ.ದೊಡ್ಡಿಯಲ್ಲಿ ಮತ್ತೊಂದು ನಾಡಕಚೇರಿ ತೆರೆವುದು, ತೆಂಗು ಮತ್ತು ಕಬ್ಬಿಗೆ ಬೆಂಬಲ ಬೆಲೆ ನೀಡುವುದು, ರೈತರಿಗೆ ಉಚಿತ ಬಿತ್ತನೆ ಬೀಜ ಕೊಡಿಸುವಂತೆ, ಗ್ರಾಮಲೆಕ್ಕಾಧಿಕಾರಿಗಳು ಸ್ಥಳೀಯ ರೈತರಿಗೆ ಸಿಗುವಂತೆ ಮನವಿ ಸಲ್ಲಿಸಿದರು. ನಿಮ್ಮ ಬೇಡಿಕೆ ಈಡೇರಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.