ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೈತರು ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಉಪ ಬೆಳೆಗಳನ್ನು ಬೆಳೆಯಬೇಕು. ಆ ಮೂಲಕ ಮಾಲ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ತಮ್ಮ ಸ್ಥಾನವನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಬೆಂಗಳೂರು ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿ.ವೆಂಕಟಸುಬ್ರಮಣಿಯನ್ ತಿಳಿಸಿದರು.ನಗರದ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ , ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಅಂಗವಾಗಿ “ ಕೃಷಿ ಯಾನ- ಕೃಷಿ ಪ್ರವಾಸೋದ್ಯಮ ಕೇಂದ್ರ” ಹಾಗೂ “ ಸಹ್ಯಾದ್ರಿ ಆಹಾರೋತ್ಪನ್ನಗಳ ಮಾರಾಟ ಮಳಿಗೆ " ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಹಿತದೃಷ್ಟಿಯಿಂದ ಕೃಷಿ ವಿಶ್ವವಿದ್ಯಾಲಯವು ಹೊಸ ಉತ್ಪನ್ನಗಳನ್ನು ತಯಾರು ಮಾಡಲು ಅನೇಕ ಸೌಲಭ್ಯಗಳು ಹಾಗೂ ಸಹಕಾರವನ್ನು ನೀಡುತ್ತಿದ್ದು, ರೈತರು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ವರ್ತಮಾನದಲ್ಲಿ ರೈತರು ಉಪ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇದರಿಂದ ರೈತರ ಉತ್ಪನ್ನಗಳಿಗೆ ಬೃಹತ್ ಮಾರುಕಟ್ಟೆ ಸೃಷ್ಟಿಯಾಗಲಿದೆ ಎಂದರು.ಭಾರತವು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲಿ ಕ್ರಾಂತಿ ಬಳಿಕ ಈಗ ಸಮೃದ್ಧಿ ಕ್ರಾಂತಿಗೆ ಕಾಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮೃದ್ದಿ ಕ್ರಾಂತಿಗೆ ಕರೆ ನೀಡಿದ್ದು, ಕೃಷಿ ಸಂಶೋಧನೆಗಳು ಆ ದಿಕ್ಕಿನಲ್ಲಿ ಸಾಗಬೇಕಿದೆ. ಕೃಷಿಯಲ್ಲಿನ ತಂತ್ರಜ್ಞಾನವು ರೈತರ ಉತ್ಪನ್ನಗಳ ಮಾರುಕಟ್ಟೆಯ ನೆರವಿಗೆ ಬರಬೇಕಿದೆ. ಆ ಮೂಲಕ ಕೃಷಿ ಲಾಭದಾಯಕವಾಗಬೇಕು, ಇದರಿಂದ ಯುವಜನರು ಕೂಡ ಕೃಷಿಯತ್ತ ಮುಖ ಮಾಡುವ ವಾತಾರವಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಎಚ್.ಡಿ. ದೇವಿಕುಮಾರ್ ಮಾತನಾಡಿ, ಬಡತನದಿಂದ ದೇಶದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಜನರು ನರಳುತ್ತಿದ್ದಾರೆ. ಅನ್ನ ತಿನ್ನುವವನಿಗಿಂತ ಚೆಲ್ಲುವವರ ಸಂಖ್ಯೆ ಹೆಚ್ಚಾಗಿದ್ದು, ತಿಳುವಳಿಕೆ ಹೊಂದಿರುವ ಜನರೇ ಇಂತಹ ಕೆಲಸವನ್ನು ಮಾಡುತ್ತಿರುವುದು ದುಃಖಕರವಾಗಿದೆ. ಇಂದಿಗೂ ಸಹ ವಿಶ್ವದಾದ್ಯಂತ ಕೋಟ್ಯಾಂತರ ಜನರು ಹಸಿವಿನಿಂದ ಬಳಲುತ್ತಿದ್ದು, ಹಸಿವಿನ ಸಮಸ್ಯೆ ಹಾಗೂ ಆಹಾರ ಸೇವನೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಅ.16 ರಂದು ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯ ವಾರ್ಷಿಕೋತ್ಸವವನ್ನು ಗುರುತಿಸಲು ವಿಶ್ವ ಆಹಾರ ದಿನವನ್ನು 1945 ಅ.16 ರಂದು ಪ್ರಾರಂಭಿಸಲಾಯಿತು. ಪ್ರಪಂಚದಾದ್ಯಂತ ಬಡತವನ್ನು ಕಡಿಮೆ ಮಾಡುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವುದು ಇದರ ಮುಖ್ಯ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ.
ಈ ವರ್ಷದ ಆಹಾರ ದಿನಾಚರಣೆಯು ಎಲ್ಲರಿಗೂ ನೀರು ಮತ್ತು ಪೋಷಣೆ ಬಗ್ಗೆ ಕೇಂದ್ರಿಕರಿಸುತ್ತಿದೆ. ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆಹಾರವನ್ನು ವ್ಯರ್ಥ ಮಾಡಬಾರದು. ಹಸಿದವರಿಗೆ ಊಟವನ್ನು ನೀಡಬೇಕು. ಆ ಮೂಲಕ ದಯೆ, ಕರುಣೆಯ ಬದುಕನ್ನು ಸಾಗಿಸಬೇಕು. ಆರೋಗ್ಯ ಮತ್ತು ಅಭಿವೃದ್ಧಿ, ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಎಲ್ಲರಿಗೂ ಅಗತ್ಯವಾಗಿ ಬೇಕಾಗಿದ್ದು, ಜನರಿಗೆ ಪೌಷ್ಟಿಕ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ.ಜಗದೀಶ್ ವಹಿಸಿದ್ದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಕಿರಣ್ ಕುಮಾರ್, ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಹೆಚ್.ಎಸ್.ಶಶಾಂಕ್, ಕೃಷಿ ವಿವಿಯ ಡೀನ್ ಡಾ.ಡಿ.ತಿಪ್ಪೇಶ್, ವಿವಿಯ ವಿಸ್ತರಣಾ ನಿರ್ದೇಶಕರು ಜಿ.ಕೆ.ಗೀರೀಶ್ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ.ಬಿ.ಸಿ.ಹನುಮಂತಸ್ವಾಮಿ, ವಿವಿ ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾ ನಾಯ್ಕ್, ವಿವಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಹಾಜರಿದ್ದರು.