ಸಾರಾಂಶ
ನರಗುಂದ ತಾಲೂಕಿನ ಕೊಣ್ಣೂರ ಹಾಗೂ ನರಗುಂದ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಸಂದರ್ಭದಲ್ಲಿ ಅತಿವೃಷ್ಟಿಯಾಗಿ ಗೋವಿನಜೋಳ, ಹೆಸರು, ಹತ್ತಿ ಹಾಗೂ ಉಳ್ಳಾಗಡ್ಡಿ ಬೆಳೆಗಳು ಹಾನಿಯಾಗಿದ್ದವು. ಅದಕ್ಕಾಗಿ ಬೆಳೆ ವಿಮೆಗಾಗಿ ಲಕ್ಷಾಂತರ ರುಪಾಯಿಗಳ ವಿಮಾ ಕಂತು ಪಾವತಿಸಲಾಗಿದೆ. ಆದರೆ ವಿಮಾ ಕಂತು ಪಾವತಿಸಿಕೊಂಡ ಒರಿಯಂಟಲ್ ಇನ್ಸೂರನ್ಸ್ ಕಂಪನಿ ಇಲ್ಲಿಯವರೆಗೂ ಎಲ್ಲ ರೈತರಿಗೆ ಬೆಳೆ ವಿಮೆಯಾಗಲಿ, ಮಧ್ಯಂತರ ಪರಿಹಾರವಾಗಲಿ ಪಾವತಿಸಿಲ್ಲ ಎಂದು ಆರೋಪಿಸಿ ರೈತರು ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನರಗುಂದ: ತಾಲೂಕಿನ ಕೊಣ್ಣೂರ ಹಾಗೂ ನರಗುಂದ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಸಂದರ್ಭದಲ್ಲಿ ಅತಿವೃಷ್ಟಿಯಾಗಿ ಗೋವಿನಜೋಳ, ಹೆಸರು, ಹತ್ತಿ ಹಾಗೂ ಉಳ್ಳಾಗಡ್ಡಿ ಬೆಳೆಗಳು ಹಾನಿಯಾಗಿದ್ದವು. ಅದಕ್ಕಾಗಿ ಬೆಳೆ ವಿಮೆಗಾಗಿ ಲಕ್ಷಾಂತರ ರುಪಾಯಿಗಳ ವಿಮಾ ಕಂತು ಪಾವತಿಸಲಾಗಿದೆ. ಆದರೆ ವಿಮಾ ಕಂತು ಪಾವತಿಸಿಕೊಂಡ ಒರಿಯಂಟಲ್ ಇನ್ಸೂರನ್ಸ್ ಕಂಪನಿ ಇಲ್ಲಿಯವರೆಗೂ ಎಲ್ಲ ರೈತರಿಗೆ ಬೆಳೆ ವಿಮೆಯಾಗಲಿ, ಮಧ್ಯಂತರ ಪರಿಹಾರವಾಗಲಿ ಪಾವತಿಸಿಲ್ಲ ಎಂದು ಆರೋಪಿಸಿ ರೈತರು ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆ ನಂತರ ವಿವಿಧ ರೈತರು ಮಾತನಾಡಿ, ಮುಂಗಾರು ಸಂದರ್ಭದಲ್ಲಿ ಅತಿವೃಷ್ಟಿಯಾಗಿ ಬೆಳೆಹಾನಿಯಾದಾಗ ತಕ್ಷಣ ಮಧ್ಯಂತರ ಪರಿಹಾರ ನೀಡಬೇಕು ಎಂದು ಸರ್ಕಾರದ ನಿರ್ದೆಶನವಿದ್ದರೂ ಅದು ಈಡೇರಿಲ್ಲ. ಇದಕ್ಕಾಗಿ ಮಳೆಯಾದ ಸಂದರ್ಭದಲ್ಲಿ ಕೃಷಿ ಇಲಾಖೆಯಲ್ಲಿ ಅರ್ಜಿಗಳನ್ನೂ ಸಲ್ಲಿಸಲಾಗಿತ್ತು. ಆದರೆ ಅರ್ಜಿ ಸಲ್ಲಿಸಿದವರಿಗೆ ಮಧ್ಯಂತರ ಪರಿಹಾರ ಜಮಾ ಆಗಿಲ್ಲ. ಅರ್ಜಿ ಸಲ್ಲಿಸದವರಿಗೆ ಜಮಾ ಆಗಿದೆ. ಇದು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಾಗಿದೆ ಎಂದು ರೈತರು ಆರೋಪಿಸಿದರು. ಎಲ್ಲ ರೈತರಿಗೂ ಪರಿಹಾರ ಪರಿಹಾರ ವಿತರಣೆ ಮಾಡಬೇಕು. ವಿಮಾ ಕಂಪನಿ ಅಧಿಕಾರಿಗಳನ್ನು ಇಲ್ಲಿಗೆ ಕರೆಯಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದ ಘಟನೆ ನಡೆಯಿತು. ಕೃಷಿ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ಉಂಟಾಯಿತು. ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್ ಜನಮಟ್ಟಿ ಮಧ್ಯಪ್ರವೇಶಿಸಿ ರೈತರನ್ನು ಸಮಾಧಾನ ಪಡಿಸಿದರು. ನಂತರ ತಹಸೀಲ್ದಾರ್ ಶ್ರೀಶೈಲ ತಳವಾರ ಸಮ್ಮುಖದಲ್ಲಿ ಸಭೆ ನಡೆಸಿ ರೈತರಿಗೆ ವಾಸ್ತವ ಸ್ಥಿತಿ ವಿವರಿಸಲಾಯಿತು.ಮೂರು ದಿನದೊಳಗೆ ಒರಿಯೆಂಟಲ್ ಇನ್ಸೂರನ್ಸ್ ಕಂಪನಿ ಮುಖ್ಯಾಧಿಕಾರಿ ಬಂದು ಮಧ್ಯಂತರ ಪರಿಹಾರ ಹಾಗೂ ಬೆಳೆ ವಿಮೆ ನೀಡಬೇಕು, ಇಲ್ಲವಾದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಂಕ್ರಗೌಡ ಶಿರಿಯಪ್ಪಗೌಡ್ರ, ಸತೀಶ ಕರಿಯಪ್ಪನವರ, ಸಂದೀಪ ಯಲ್ಲಪ್ಪಗೌಡ್ರ, ಅಶೋಕ ಕಾಮಮನ್ನವ, ಸುನೀಲಗೌಡ ಪಾಟೀಲ, ಫಕೀರಪ್ಪ ಅಣ್ಣೀಗೇರಿ, ದಾದಾಕಲಂದರ ಆಶೇಕಖಾನ, ಶಿವಾನಂದ ಶಿರಹಟ್ಟಿ, ಶಿವನಗೌಡ ಗಿರಿಯಪ್ಫಗೌಡ್ರ, ಶಂಕರಗೌಡ ಕರಿಗೌಡ್ರ, ತಿಮ್ಮರಡ್ಡಿ ವಾಸನ, ಆನಂದ ಬಿಜಾಪುರ, ಗಿರೀಶ ಕಿತ್ತೂರ, ರಮೇಶ ಮಳಲಿ ಇದ್ದರು.