ಸಾರಾಂಶ
ರಾಣಿಬೆನ್ನೂರು: ತಾಲೂಕಿನ ಯಕ್ಲಾಸಪುರ ಗ್ರಾಮದ ನೂರಾರು ರೈತರಿಗೆ ಬೆಳೆವಿಮೆ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಹನುಂಮತಪ್ಪ ಕಬ್ಬಾರ ಮಾತನಾಡಿ, ಅಧಿಕಾರಿಗಳು ಬೆಳೆವಿಮೆ ಸಮೀಕ್ಷೆ ಮಾಡುವಲ್ಲಿ ಯಡವಟ್ಟು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ನಿಜವಾಗಿ ಬೆಳೆ ಬೆಳೆದವರಿಗೆ ಬೆಳೆವಿಮೆ ಪರಿಹಾರ ಬಂದಿಲ್ಲ. ಯಕ್ಲಾಸಪುರ ಗ್ರಾಮದ 800ಕ್ಕೂ ಅಧಿಕ ಎಕರೆ ಜಮೀನಿನ ರೈತರಿಗೆ ಪರಿಹಾರ ಬಂದಿಲ್ಲ. ಅವರ ಬದಲಾಗಿ ಕಬ್ಬು ಬೆಳೆದ ರೈತರಿಗೆ ಮೆಕ್ಕೆಜೋಳ ಬೆಳೆಯ ಪರಿಹಾರ ಬಂದಿದೆ. ಅಡಕೆ ಬೆಳೆದ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಳೆವಿಮೆ ಪರಿಹಾರ ಬಂದಿಲ್ಲ ಎಂದು ಆರೋಪಿಸಿದರು.ರೈತರು ಬೆಳೆವಿಮೆ ಪರಿಹಾರ ಬಾರದ ಕಾರಣ ಜಮೀನಿನಲ್ಲಿ ಕೆಲಸ ಮಾಡುವುದನ್ನು ಬಿಟ್ಟು ತಹಸೀಲ್ದಾರ್ ಕಚೇರಿಗೆ ಅಲೆದಾಡುವಂತಾಗಿದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಬಾರದಿರುವ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸ್ಥಳಕ್ಕೆ ಬಂದ ತಹಸೀಲ್ದಾರ್ ಸುರೇಶಕುಮಾರ ಟಿ. ಮಾತನಾಡಿ, ಬೆಳೆವಿಮೆ ವಿತರಣೆಯಲ್ಲಿ ತೊಂದರೆಯಾದ ಕುರಿತು ಪರಿಶೀಲಿಸಿ ಜೂ. 15ರೊಳಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.ಹನುಮಂತಪ್ಪ ಓಲೇಕಾರ, ನಿಂಗಪ್ಪ ನಲವಾಗಿಲ, ನಾಗರಾಜ ಓಲೇಕಾರ ಮತ್ತಿತರರು ಪಾಲ್ಗೊಂಡಿದ್ದರು.