ಸಾರಾಂಶ
- ಸ್ಥಳಕ್ಕೆ ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಭೇಟಿ, ಪರಿಸ್ಥಿತಿ ನಿಯಂತ್ರಣ - - - ಚನ್ನಗಿರಿ: ಪಟ್ಟಣದ ತುಮ್ಕೋಸ್ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಕಳಪೆ ಗುಣಮಟ್ಟದ ಅಡಕೆಯನ್ನು ಪಾಸು ಮಾಡಿ ಗುಣಮಟ್ಟದ ಅಡಕೆಗಳನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ತುಮ್ಕೋಸ್ ಮುಖ್ಯ ಕಚೇರಿ ಮುಂದೆ ನೂರಾರು ರೈತರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಗತೂರು ಗ್ರಾಮದ ಬಿ.ಎಸ್.ರಾಜಪ್ಪ ಎಂಬವರಿಗೆ ಸೇರಿದ 65 ಕ್ವಿಂಟಲ್ ಅಡಕೆಯನ್ನು ಮಾರಾಟ ಮಾಡಲು ಪಟ್ಟಣದ ತುಮ್ಕೋಸ್‌ಗೆ ತರಲಾಗಿತ್ತು. ಈ ಅಡಕೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಅಲ್ಲಿನ ಸಿಬ್ಬಂದಿ ಪರಿಶೀಲನೆ ನಡೆಸಿ ರಿಜೆಕ್ಟ್ ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ಇದೇ ಸಂಸ್ಥೆ ನಿರ್ದೇಶಕ ಚಂದ್ರಶೇಖರ್ ಎಂಬವರಿಗೆ ಸೇರಿದ್ದೆನ್ನಲಾದ ಸುಮಾರು 80 ಕ್ವಿಂಟಲ್ ಅಡಕೆಯನ್ನು ತರಲಾಗಿತ್ತು. ಈ ಅಡಕೆ ಬಿ.ಎಸ್.ರಾಜಪ್ಪನವರ ಅಡಕೆಗಿಂತ ಕಳಪೆ ಗುಣಮಟ್ಟದ್ದಾಗಿದ್ದರೂ, ಚಂದ್ರಶೇಖರ್ ಅವರ ಅಡಕೆ ಗುಣಮಟ್ಟದ್ದಾಗಿದೆ ಎಂದು ಪಾಸು ಮಾಡಿದ್ದಾರೆ. ಇದನ್ನು ಗಮನಿಸಿದ ರೈತ ಬಿ.ಎಸ್.ರಾಜಪ್ಪ, ನನ್ನ ಅಡಕೆಗಿಂತ ಈ ಅಡಕೆ ಕಳಪೆ ಗುಣಮಟ್ಟದಲ್ಲಿದೆ. ಈ ಅಡಕೆಯನ್ನು ಹೇಗೆ ಪಾಸು ಮಾಡಿದ್ದೀರಿ ಎಂದು ಸಿಬ್ಬಂದಿ ಜೊತೆ ವಾಗ್ವಾದ ನಡೆಸಿ, ರೈತರನ್ನು ಸ್ಥಳಕ್ಕೆ ಕರೆಸಿಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ.
ಅಡಕೆ ಬೆಳೆಗಾರ ರೈತ ಹೊನ್ನೆಬಾಗಿ ರಂಗನಾಥ್ ಈ ಸಂದರ್ಭ ಮಾತನಾಡಿ, ತಾಲೂಕಿನಲ್ಲಿ ಹೆಚ್ಚು ಭಾಗ 1, 2 ಎಕರೆ ಅಡಕೆ ಬೆಳೆಗಾರ ರೈತರುಗಳಿದ್ದಾರೆ. ಇಂತಹ ಸಣ್ಣ ಸಾಮಾನ್ಯ ರೈತರು ಬೆಳೆದ ಅಡಕೆಯನ್ನು ಮಾರಾಟಕ್ಕೆ ತಂದಾಗ ಒಂದಿಲ್ಲೊಂದು ಕಾರಣ ನೀಡಿ, ಅಡಕೆಯನ್ನು ರಿಜೆಕ್ಟ್ ಮಾಡುತ್ತಾರೆ. ಆದರೆ ಪ್ರಭಾವಿ ವ್ಯಕ್ತಿಗಳ ಮತ್ತು ಆಡಳಿತ ಮಂಡಳಿ ನಿರ್ದೇಶಕರ ಅಡಕೆಗಳು ಹೇಗೇ ಇದ್ದರೂ ಅವುಗಳನ್ನು ಖರೀದಿಸುತ್ತಾರೆ. ಹೀಗಾದರೆ ಸಣ್ಣ ರೈತರು ಅಡಕೆ ಮಾರಾಟಕ್ಕೆ ಮುಂದಾಗಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ವಿಷಯ ತಿಳಿದು ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
- - - -17ಕೆಸಿಎನ್ಜಿ5:ಚನ್ನಗಿರಿ ಪಟ್ಟಣದ ತುಮ್ಕೋಸ್ ಮುಖ್ಯ ಕಚೇರಿ ಎದುರು ಅಡಕೆ ಖರೀದಿ ತಾರತಮ್ಯ ಖಂಡಿಸಿ ಬೆಳೆಗಾರರು ಪ್ರತಿಭಟನೆ ನಡೆಸಿದರು.