ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ೫೩ ನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾಡಳಿತ ರೈತರ ಬೇಡಿಕೆಗೆ ಸ್ಪಂದಿಸಿದಿರುವುದನ್ನು ಖಂಡಿಸಿ ಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ಟ್ರ್ಯಾಕ್ಟರ್‌,ಎತ್ತಿನಗಾಡಿ ಜಾಥಾ ನಡೆಸಿದರು ಅಲ್ಲದೆ ತಾಲೂಕು ಕಚೇರಿಯಲ್ಲಿ ಬಹಿರಂಗ ಪ್ರತಿಭಟನಾ ಸಮಾವೇಶ ನಡೆಸಿ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ೫೩ ನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾಡಳಿತ ರೈತರ ಬೇಡಿಕೆಗೆ ಸ್ಪಂದಿಸಿದಿರುವುದನ್ನು ಖಂಡಿಸಿ ಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ಟ್ರ್ಯಾಕ್ಟರ್‌,ಎತ್ತಿನಗಾಡಿ ಜಾಥಾ ನಡೆಸಿದರು ಅಲ್ಲದೆ ತಾಲೂಕು ಕಚೇರಿಯಲ್ಲಿ ಬಹಿರಂಗ ಪ್ರತಿಭಟನಾ ಸಮಾವೇಶ ನಡೆಸಿ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಿಂದ ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗುತ್ತ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಮಾವೇಶದಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್ ಪ್ರಭು ಮಾತನಾಡಿ ಕಳೆದ ವರ್ಷವೂ ೩೭ ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಲಾಗಿತ್ತು.ಈ ವರ್ಷವೂ ರೈತರ ಬೇಡಿಕೆಗಳು ಈಡೇರದ ಕಾರಣ ಕಳೆದ ೫೩ ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಚಳುವಳಿಗೆ ಸ್ಪಂದಿಸಿದ ಜಿಲ್ಲಾಡಳಿತದ ವಿರುದ್ಧ ರಾಜ್ಯ ರೈತಸಂಘದ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ದೊಡ್ಡ ಮಟ್ಟದಲ್ಲಿ ಚಳುವಳಿ ನಡೆಸಲಾಗಲು ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಚುನಾವಣೆ ಸಂದರ್ಭದಲ್ಲಿ ಜಾತಿ ಮತ್ತು ಪಕ್ಷಗಳ ಹೆಸರಿನಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು, ಅಧಿಕಾರಕ್ಕೆ ಬಂದ ಬಳಿಕ ರೈತರ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ.ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಸ್ಪರ ಜವಾಬ್ದಾರಿ ವರ್ಗಾಯಿಸುತ್ತಿದ್ದು,ರೈತರು ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ಕಳೆದ ವರ್ಷದಲ್ಲಿ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ೩೭ ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಲಾಗಿತ್ತು.ಅಂದು ಸಚಿವ ಈಶ್ವರ್ ಖಂಡ್ರೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರೂ, ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

೪ನೇ ಹಂತದ ಕೆರೆಗಳಿಗೆ ಏಕಕಾಲದಲ್ಲಿ ನೀರು ತುಂಬಿಸಬೇಕು.ರೈತರಿಗೆ ಸಾಗುವಳಿ ಹಕ್ಕುಪತ್ರ ವಿತರಿಸಬೇಕು.ಬೆಳವಾಡಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದರು.

ಮೈಸೂರು ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಸಂವಿಧಾನ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ನೀಡಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು, ನಂತರ ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ಟೀಕಿಸಿದರು.

ಪ್ರತಿಭಟನಾ ಸ್ಥಳದಲ್ಲಿ ತಹಸೀಲ್ದಾರ್‌ ಎಂ.ಎಸ್.ತನ್ಮಯ್‌, ಬಂಡೀಪುರ ಸಹಾಯಕ ಅರಣ್ಯ ಸಂರಕ್ಷನಾಧಿಕಾರಿ ಶುಭಂ ಸಿಂಗ್ ತನ್ವರ್‌ ಮಾತನಾಡಿದರು.

ರೈತ ಮುಖಂಡರಾದ ಕೆಂಪೂಗೌಡ, ಕೆ.ಮಲ್ಲಯ್ಯ, ಮಹೇಶ್ ಕುಮಾರ್, ನೇತ್ರಾವತಿ, ಹೊಸೂರು ಕುಮಾರ್, ವೆಂಕಟಚಲ, ಸೋಮಶೇಖರ್, ಮಹದೇವ್, ಮಲ್ಲಣ್ಣ, ಪಳನಿಸ್ವಾಮಿ, ಶಿವಣ್ಣಮಲ್ಲಯ್ಯನಪುರ, ಬಸಮ್ಮ,ಕನಕಮ್ಮ ಕೋಡಹಳ್ಳಿ ಮಹದೇವಪ್ರಸಾದ್, ರಘು, ಪ್ರವೀಣ್, ರೈತ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.