ಸಾರಾಂಶ
ಚನ್ನಮ್ಮನ ಕಿತ್ತೂರು ತಾಲೂಕಿನ ದೇವಗಾಂವ, ಲಿಂಗದಳ್ಳಿ ಬಳಿ ಇರುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ತಾಲೂಕಿನ ದೇವಗಾಂವ, ಲಿಂಗದಳ್ಳಿ ಬಳಿ ಇರುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.36 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದ 14 ಕುಟುಂಬಗಳಿಗೆ ಎರಡು ದಿನಗಳ ಹಿಂದೆ ಅಧಿಕಾರಿಗಳು ನೋಟಿಸ್ ನೀಡಿ ಮಂಗಳವಾರ ಆಗಮಿಸಿದ್ದ ಅಧಿಕಾರಿಗಳು ಒತ್ತುವರಿ ಭೂಮಿ ವಶಕ್ಕೆ ಪಡೆಯಲು 5 ಜೆಸಿಬಿಯೊಂದಿಗೆ 200ಕ್ಕೂ ಅಧಿಕ ಪೊಲೀಸರ ಭದ್ರತೆಯಲ್ಲಿ ಒತ್ತುವರಿ ತೆರವಿಗೆ ಮುಂದಾದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ರೈತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಅಧಿಕಾರಿಗಳು ತಿಳಿ ಹೇಳಿದರೂ ಜಗ್ಗದ ರೈತರು, ಹಲವಾರು ವರ್ಷಗಳಿಂದ ಇಲ್ಲಿ ಉಳುಮೆ ಮಾಡುತ್ತಿದ್ದೇವೆ. ಇಲ್ಲಿಯೇ ಜೀವನ ಕಟ್ಟಿಕೊಂಡಿದ್ದೇವೆ. ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡಲೆತ್ನಿಸಿದರೆ ತೀವ್ರ ಹೋರಾಟ ಮಾಡಲಾಗುವುದು. ಈ ಕುರಿತು ಕಾನೂನು ಹೋರಾಟಕ್ಕೂ ರೈತರು ಮುಂದಾಗಿರುವುದನ್ನು ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, 2 ವರ್ಷಗಳಿಂದಲೂ ಒತ್ತುವರಿ ತೆರವುಗೊಳಿಸಲು ರೈತರಿಗೆ ಸಾಕಷ್ಟು ಬಾರಿ ತಿಳಿವಳಿಕೆ ನೀಡಲಾಗಿದೆ. ಇನ್ನು ಕೇವಲ ಎರಡು ತಿಂಗಳಷ್ಟೇ ಬೆಳೆ ತೆಗೆದುಕೊಳ್ಳಲು ಕಾಲಾವಧಿ ನೀಡಲಾಗುವುದು. ಬಳಿಕ ಒತ್ತುವರಿಗೊಂಡಿರುವ ಭೂಮಿಯನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿ ಅಧಿಕಾರಿಗಳು ಅಲ್ಲಿಂದ ತೆರಳಿದರು.