ಸಾಲ ಮಂಜೂರು ಮಾಡದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಎದುರು ರೈತರ ಪ್ರತಿಭಟನೆ

| Published : Aug 27 2024, 01:43 AM IST

ಸಾರಾಂಶ

ಬ್ಯಾಂಕ್‌ನ ವ್ಯವಸ್ಥಾಪಕರರನ್ನು ತರಾಟೆಗೆ ತೆಗೆದುಕೊಂಡು ಸಾಲ ನೀಡದಿದ್ದ ಮೇಲೆ ರೈತನ ಭೂಮಿ ಬ್ಯಾಂಕ್‌ನ ಹೆಸರಿಗೆ ಆಧಾರ ಮಾಡಿಸಿಕೊಂಡಿರುವುದಾದರೂ ಏಕೆ ಎಂದು ಪ್ರಶ್ನಿಸಿದರು. ಬ್ಯಾಂಕ್‌ನ ವ್ಯವಸ್ತಾಪಕರ ವಿರುದ್ಧ ಕ್ರಮ ಜರುಗಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾಲ ನೀಡುವುದಾಗಿ ಹೇಳಿ ರೈತರ ಭೂಮಿಯನ್ನು ಬ್ಯಾಂಕ್‌ನ ಹೆಸರಿಗೆ ಆಧಾರ ಮಾಡಿಸಿಕೊಂಡಿದ್ದರೂ ರೈತರಿಗೆ ಸಾಲ ಮಂಜೂರು ಮಾಡದೆ ಸತಾಯಿಸುತ್ತಿದ್ದಾರೆ ಎಂದು ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಆವರಣದಲ್ಲಿ ರೈತಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಗ್ರಾಮೀಣ ಬ್ಯಾಂಕ್‌ನ ಆವರಣಕ್ಕೆ ಆಗಮಿಸಿದ ರೈತರು ಸಾಲ ಮಂಜೂರು ಮಾಡದೆ ರೈತನ ಆಸ್ತಿಯನ್ನು ಆಧಾರ ಮಾಡಿಸಿಕೊಂಡಿರುವ ಬ್ಯಾಂಕ್‌ನ ಕಾರ್ಯವೈಖರಿ, ವ್ಯವಸ್ಥಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಡುವಿನಕೋಡಿ ಗ್ರಾಮದ ರೈತ ಪ್ರಕಾಶ್ ಬ್ಯಾಂಕ್‌ನಿಂದ ಕೃಷಿ ಸಾಲ ಮತ್ತು ಕೃಷಿ ಅಭಿವೃದ್ಧಿ ಸಾಲ ಪಡೆಯಲು ಬಂದಿದ್ದಾರೆ. ಬೆಳೆ ಸಾಲ 4.50 ಲಕ್ಷ ಮತ್ತು ಕೃಷಿ ಅಭಿವೃದ್ಧಿ ಸಾಲ 5 ಲಕ್ಷ ಸೇರಿ ಒಟ್ಟು 9.80 ಲಕ್ಷ ರು. ಸಾಲ ನೀಡುವುದಾಗಿ ಬ್ಯಾಂಕ್‌ನ ವ್ಯವಸ್ತಾಪಕರು ಪ್ರಕಾಶ್ ಅವರಿಗೆ ಸೇರಿದ ಮಡುವಿನಕೋಡಿ ಸರ್ವೇ 208ರಲ್ಲಿನ ಎರಡು ಎಕರೆ ಕೃಷಿ ಭೂಮಿ ಮತ್ತು ಸರ್ವೇ ನಂ 219ರಲ್ಲಿನ ಒಂದು ಎಕರೆ ಸೇರಿ ಒಟ್ಟು 3 ಎಕರೆ ಕೃಷಿ ಭೂಮಿಯನ್ನು ಬ್ಯಾಂಕ್‌ಗೆ ಆಧಾರ ಮಾಡಿಸಿಕೊಂಡು ಬೆಳೆ ಸಾಲ 4.80 ಲಕ್ಷ ರು.ಗಳ ಹಳೇ ಸಾಲವನ್ನು ರಿನೀವಲ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಸದಾಗಿ ನೀಡಬೇಕಾಗಿದ್ದ ಅಭಿವೃದ್ಧಿ ಸಾಲ 5 ಲಕ್ಷ ರು.ಗಳನ್ನು ರೈತನನ್ನು ನಾಳೆ, ನಾಡಿದ್ದು ಎಂದು ಸಬೂಬು ಹೇಳಿ ಕಳೆದ ಮೂರು ತಿಂಗಳಿನಿಂದ ನಿತ್ಯ ಬ್ಯಾಂಕ್‌ನ ಬಾಗಿಲಿಗೆ ತಿರುಗಾಡಿಸುತ್ತಿದ್ದಾರೆ ಎಂದು ಕಿಡಿಕಾರಿದಾರು.

ಬ್ಯಾಂಕ್‌ನ ವ್ಯವಸ್ಥಾಪಕರರನ್ನು ತರಾಟೆಗೆ ತೆಗೆದುಕೊಂಡು ಸಾಲ ನೀಡದಿದ್ದ ಮೇಲೆ ರೈತನ ಭೂಮಿ ಬ್ಯಾಂಕ್‌ನ ಹೆಸರಿಗೆ ಆಧಾರ ಮಾಡಿಸಿಕೊಂಡಿರುವುದಾದರೂ ಏಕೆ ಎಂದು ಪ್ರಶ್ನಿಸಿದರು. ಬ್ಯಾಂಕ್‌ನ ವ್ಯವಸ್ತಾಪಕರ ವಿರುದ್ಧ ಕ್ರಮ ಜರುಗಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಬ್ಯಾಂಕ್‌ನ ವ್ಯವಸ್ಥಾಪಕ ಗಿರೀಶ್ ರೈತ ಮಡುವಿನ ಕೋಡಿ ಪ್ರಕಾಶ್ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಆಗಸ್ಟ್ 31 ರೊಳಗೆ ಸಾಲ ಮಜೂರು ಮಾಡುವುದಾಗಿ ಭರವಸೆ ನೀಡಿದರು. ಸಾಲ ನೀಡದೆ ಅನಗತ್ಯವಾಗಿ ಸುತ್ತಾಡಿಸಿರುವ ಬ್ಯಾಂಕ್‌ನ ಈ ಹಿಂದಿನ ವ್ಯವಸ್ಥಾಪಕರಾದ ಅಮೀದ್ ಮತ್ತು ರವಿ ವಿರುದ್ಧ ಕ್ರಮ ಜರುಗಿಸುವಂತೆ ದೂರವಾಣಿ ಮೂಲಕ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಿಗೆ ದೂರು ನೀಡಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಮುಖಂಡರಾದ ಬೂಕನಕೆರೆ ನಾಗರಾಜು, ಸಿಂಧಘಟ್ಟ ಮುದ್ದುಕುಮಾರ್, ಮಡುವಿನಕೋಡಿ ಪ್ರಕಾಶ್, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕೃಷ್ಣಾಪುರ ರಾಜಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ, ನೀತಿಮಂಗಲ ಮಹೇಶ್, ಕಾಗೇಪುರ ಮಹೇಶ್, ಚೌಡೇನಹಳ್ಳಿ ನಾರಾಯಣಸ್ವಾಮಿ ಹಲವು ರೈತರು ಇದ್ದರು.