ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಸ್ಥಳೀಯ ಕಬ್ಬನ್ನು ನಿರ್ಲಕ್ಷಿಸಿ ಹೊರ ಜಿಲ್ಲೆಗಳಿಂದ ಕಬ್ಬು ಆಮದು ಮಾಡಿಕೊಳ್ಳುತ್ತಿರುವ ತಾಲೂಕಿನ ಕೊಪ್ಪ ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕ್ರಮ ವಿರೋಧಿಸಿ ಬೆಕ್ಕಳಲೆ ಗ್ರಾಮದ ರೈತರು ಗುರುವಾರ ರಾತ್ರಿ ಕಬ್ಬು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.ರೈತರ ಪ್ರತಿಭಟನೆ ಮುನ್ಸೂಚನೆ ಅರಿತ ಕೆಲವು ಲಾರಿ ಚಾಲಕರು ಅನ್ಯಮಾರ್ಗದಿಂದ ಕಾರ್ಖಾನೆಗೆ ಕಬ್ಬು ಸಾಗಾಣಿಕೆ ಮಾಡಿದ್ದಾರೆ. ಉಳಿದ ಲಾರಿಗಳನ್ನು ರೈತರು ತಡೆದು ಪ್ರತಿಭಟನೆ ಮುಂದುವರಿಸಿದ್ದಾರೆ. ವಿಷಯ ತಿಳಿದು ರೈತರ ಮನವೊಲಿಸಲು ಸ್ಥಳಕ್ಕೆ ಧಾವಿಸಿದ ಕಾರ್ಖಾನೆ ಅಧಿಕಾರಿಗಳನ್ನು ರೊಚ್ಚಿಗೆದ್ದ ರೈತರ ಗುಂಪು ಘೇರಾವ್ ಮಾಡಿದರು.
ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ 9 ಕಿಮೀ ವ್ಯಾಪ್ತಿಯಲ್ಲಿ 18 ತಿಂಗಳು ಕಳೆದಿರುವ ಸುಮಾರು 4,500 ಟನ್ ಕಬ್ಬು ಬೆಳೆದು ನಿಂತಿದೆ. ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಕಟಾವು ಕೂಲಿ ಕಾರ್ಮಿಕರ ಕೊರತೆ ನೆಪ ಹೇಳಿ ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಕಬ್ಬು ಸರಬರಾಜು ಮಾಡಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಳೆದ 15 ದಿನಗಳ ಹಿಂದೆ ಸ್ಥಳೀಯ ಕಬ್ಬನ್ನು ನಿರ್ಲಕ್ಷಿಸಿ ಹೊರ ಜಿಲ್ಲೆಗಳಿಂದ ಕಬ್ಬು ಸರಬರಾಜು ಮಾಡಿಕೊಳ್ಳುತ್ತಿರುವ ಕಾರ್ಖಾನೆ ಆಡಳಿತ ಮಂಡಳಿ ಕ್ರಮ ವಿರೋಧಿಸಿ ರೈತರು ಸಕ್ಕರೆ ಸಾಗಾಣಿಕೆ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ ನಂತರ ಆಡಳಿತ ಮಂಡಳಿ ಅಧಿಕಾರಿಗಳು ಸ್ಥಳೀಯ ರೈತರ ಕಬ್ಬನ್ನು ಸಾಗಾಣಿಕೆ ಮಾಡಿಕೊಂಡು ಅರೆಯುವ ಕಾರ್ಯಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು. ಅನಂತರ ಕೂಲಿ ಕಾರ್ಮಿಕರ ಕೊರತೆ ನೆಪ ಹೇಳಿ ಹೊರ ಜಿಲ್ಲೆಗಳಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿಕೊಳ್ಳುತ್ತಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.
ಕಬ್ಬು ತುಂಬಿಕೊಂಡು ಬರುತ್ತಿರುವ ಲಾರಿಗಳನ್ನು ರೈತರು ತಡೆದು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಎನ್ ಎಸ್ ಎಲ್ಸಕ್ಕರೆ ಕಾರ್ಖಾನೆ ಮೇಲ್ವಿಚಾರಕ ಸೋಮಶೇಖರ್, ಕ್ಷೇತ್ರ ಅಧಿಕಾರಿಗಳಾದ ರವಿ ಮತ್ತು ನಿಖಿಲ್ ಅವರನ್ನು ರೈತರು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡರು.
ಬಳಿಕ ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ, ಕೊಪ್ಪ ಪಿಎಸ್ಐ ಭೀಮಪ್ಪ ಬಾಣಸಿ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಪರಿಮಳ ರಂಗನ್ ಮುಂದಿನ ಒಂದು ವಾರದಲ್ಲಿ ಕೂಲಿ ಕಾರ್ಮಿಕರನ್ನು ಸ್ಥಳೀಯ ರೈತರ ಜಮೀನುಗಳಿಗೆ ಕಳುಹಿಸಿ ಕಬ್ಬು ಕಟಾವು ಮಾಡಲು ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದ ತರುವಾಯ ರೈತರು ಪ್ರತಿಭಟನೆ ಕೈಬಿಟ್ಟರು.ಪ್ರತಿಭಟನೆಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ರಘು, ಮುಖಂಡರಾದ ಪ್ರಮೋದ್, ರಾಜು, ಹರೀಶ, ಪ್ರಕಾಶ್, ಕೃಷ್ಣ, ಗಿರೀಶ್, ಶಾಂತಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.