ಸಾರಾಂಶ
ಶ್ರೀರಂಗಪಟ್ಟಣ ತಾಲೂಕಿನ ಹಳೇ ಕಿರಂಗೂರು ಗ್ರಾಮದ ಶ್ರೀರಾಮ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಈರೇಗೌಡರ ಕುಟುಂಬ ಸದಸ್ಯರನ್ನು ತಹಸೀಲ್ದಾರ್ ಹಾಗೂ ಅಧಿಕಾರಿಕಾರಿಗಳು ಏಕಾಏಕಿ ಬೀದಿಗೆ ತಳ್ಳಿ ನ್ಯಾಯಾಂಗ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರಿಂದ ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಹಳೇ ಕಿರಂಗೂರು ಗ್ರಾಮದ ಶ್ರೀರಾಮ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಈರೇಗೌಡರ ಕುಟುಂಬ ಸದಸ್ಯರನ್ನು ತಹಸೀಲ್ದಾರ್ ಹಾಗೂ ಅಧಿಕಾರಿಕಾರಿಗಳು ಏಕಾಏಕಿ ಬೀದಿಗೆ ತಳ್ಳಿ ನ್ಯಾಯಾಂಗ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ಸೇರಿದಂತೆ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲೂಕು ಕಚೇರಿ ಎದುರು ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ರೈತರು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದ ಈರೇಗೌಡರ ಕುಟುಂಬವು ಕಳೆದ 70-80 ವರ್ಷಗಳಿಂದಲೂ ಇಲ್ಲಿನ ರಾಮಮಂದಿರದ ತಮ್ಮ ಸ್ವಂತ ಜಾಗದಲ್ಲಿ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಇದೀಗ ತಾಲೂಕು ಆಡಳಿತ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಕುಟುಂಬ ಸದಸ್ಯರನ್ನು ಹೊರಗೆ ತಳ್ಳಿ ಬೀಗ ಹಾಕಿರುವುದನ್ನು ಖಂಡಿಸಿದರು.
ತಮ್ಮ ಸ್ವಂತ ಆಸ್ತಿಯಲ್ಲಿ ಕುಟುಂಬ ಸದಸ್ಯರು ವಾಸಿಸುತ್ತಾ ಬಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ದೇವಾಲಯದ ಆಸ್ತಿಯನ್ನು ಮುಜರಾಯಿ ಆಸ್ತಿಯೆಂದು ಹೇಳಲಾಗುತ್ತಿದೆ. ಈ ಹಿಂದೆ ಇದ್ದಂತೆ ಕೂಡಲೇ ಯಥಾವತ್ತು ಪಾಲಿಸಬೇಕು ಎಂದು ಆಗ್ರಹಿಸಿದರು.ಪ್ರಕರಣ ಹೈಕೋರ್ಟ್ ಅಂಗಳದಲ್ಲಿದ್ದರೂ ತಾಲೂಕು ಆಡಳಿತ ಸ್ಥಳೀಯ ಶಾಸಕರ ಪ್ರಭಾವ ಬೆಳೆಸಿ ಕುಟುಂಬ ಸದಸ್ಯರನ್ನು ವಾಸದ ಮನೆಯಿಂದ ಹೊರಗೆ ತಳ್ಳಿ ಬೀಗ ಹಾಕುವ ಮೂಲಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದರು.
ಈ ಸಂಬಂಧ ತಾಲೂಕು ಆಡಳಿತವಾಗಲಿ, ಮುಜರಾಯಿ ಇಲಾಖೆಯಾಗಲಿ, ಇಲ್ಲಾ ಜಿಲ್ಲಾಡಳಿತವಾಗಲಿ. ಕಾನೂನು ರೀತಿ ದೇವಾಲಯ ಹಾಗೂ ವಾಸದ ಮನೆಯನ್ನು ವಶಪಡಿಸಿಕೊಂಡಿದ್ದಕ್ಕೆ ದಾಖಲೆ ಸಲ್ಲಿಸಬೇಕು. ಇಲ್ಲಾ ಕುಟುಂಬ ಸದಸ್ಯರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಕುಟುಂಬ ಸದಸ್ಯರು ಪ್ರತಿ ನಿತ್ಯ ತಾಲೂಕು ಕಚೇರಿ ಎದುರು ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರೈತರು, ಗ್ರಾಮಸ್ಥರು ಹಾಗೂ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.