ಕನ್ನಡಪ್ರಭ ವಾರ್ತೆ ಯಮಕನಮರಡಿರೈತ ಹೋರಾಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮೈಸೂರು ಭಾಗದ ಸುಮಾರು 25 ರೈತರನ್ನು ಮುಕ್ತಿಮಠದ ಬಳಿ ಪೊಲೀಸರು ಬಂಧಿಸಿ, ಬೇರೆಡೆಗೆ ಕರೆದೊಯ್ಯುತ್ತಿದ್ದ ವೇಳೆ ಕರಗುಪ್ಪಿ ಗ್ರಾಮದ ಬಳಿ ರೈತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ರೈತ ಹೋರಾಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಮೈಸೂರು ಭಾಗದ ಸುಮಾರು 25 ರೈತರನ್ನು ಮುಕ್ತಿಮಠದ ಬಳಿ ಪೊಲೀಸರು ಬಂಧಿಸಿ, ಬೇರೆಡೆಗೆ ಕರೆದೊಯ್ಯುತ್ತಿದ್ದ ವೇಳೆ ಕರಗುಪ್ಪಿ ಗ್ರಾಮದ ಬಳಿ ರೈತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಈ ಕುರಿತು ಮಾತನಾಡಿದ ಮೈಸೂರಿನ ರಾಜ್ಯ ರೈತ ಸಂಘದ ಉಪಾಧ್ಯಕ್ಷ ರಾಘು ಅವರು, ಮುಕ್ತಿಮಠದ ಬಳಿ ಕಾರಿನಿಂದ ಇಳಿಯುತ್ತಿದ್ದ ನಮ್ಮನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ಬೆಳಗ್ಗಿನಿಂದ ತಿಂಡಿ ತಿಂದಿರಲಿಲ್ಲ. ನೀರನ್ನಾದರೂ ಕೊಡಿ, ಹಣ ನೀಡುತ್ತೇವೆ ಎಂದು ಕೇಳಿಕೊಂಡರೂ ಪೊಲೀಸರು ಮಾರ್ಗಮಧ್ಯೆ ಎಲ್ಲಿಯೂ ವಾಹನ ನಿಲ್ಲಿಸಲಿಲ್ಲ. ಇದೇ ವೇಳೆ ಓರ್ವ ರೈತನಿಗೆ ಹೃದಯನೋವು ಕಾಣಿಸಿಕೊಂಡರೂ ಪೊಲೀಸರು ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.

ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದ ಬಳಿ ರೈತರು ರಸ್ತೆ ತಡೆದು ಗಿಡಗಂಟಿಗಳನ್ನು ಹಾಕಿದ್ದರಿಂದ ಪೊಲೀಸ್ ವಾಹನ ಅನಿವಾರ್ಯವಾಗಿ ನಿಂತಿತು. ಈ ಸಂದರ್ಭದಲ್ಲಿ ಸ್ಥಳೀಯ ರೈತರಿಗೆ ವಿಷಯ ತಿಳಿಸಿ, ವಾಹನದಿಂದ ಕೆಳಗಿಳಿದು ಪ್ರತಿಭಟನೆ ನಡೆಸಿದೆವು. ಈ ಭಾಗ ನಮಗೆ ಹೊಸದಾಗಿದ್ದರಿಂದ ಪೊಲೀಸರು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎಂಬುದು ತಿಳಿಯದಾಗಿತ್ತು. ಸ್ಥಳೀಯ ರೈತರ ಸಹಕಾರದಿಂದ ಹೋರಾಟ ಮುಂದುವರಿಸಿದೆವು ಎಂದರು.

ಪೊಲೀಸರ ಅಮಾನತಿಗೆ ಆಗ್ರಹ:

ಗುರ್ಲಾಪುರದಲ್ಲಿ ನಡೆದ ರೈತ ಹೋರಾಟದಲ್ಲಿ ಚುನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಅವರೊಂದಿಗೆ ಪಾಲ್ಗೊಂಡಿದ್ದೇವೆ. ಮುಕ್ತಿಮಠದ ಬಳಿ ನಮ್ಮನ್ನು ಬಂಧಿಸಿದ ಪೊಲೀಸರು ಜೈಲಿಗೆ ಕರೆದೊಯ್ಯುವ ಬದಲು ಬೇರೆಡೆಗೆ ಕರೆದೊಯ್ದಿದ್ದಾರೆ. ಬಂಧಿತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಪೊಲೀಸರ ಕರ್ತವ್ಯ. ಆದರೆ, ಪೊಲೀಸರು ಮಾನವೀಯತೆ ಮರೆತು ವರ್ತಿಸಿದ್ದಾರೆ. ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿ ಅವರಿಗಾಗಿ ಹೋರಾಡಲು ನಾವು ಸಿದ್ಧರಿದ್ದೇವೆ. ನಮ್ಮನ್ನು ಬೇರೆಡೆಗೆ ಕರೆದೊಯ್ದ ಪೊಲೀಸರ ವಿರುದ್ಧ ಕರ್ತವ್ಯಲೋಪದ ಆರೋಪದಡಿ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.ಕರಗುಪ್ಪಿಯಲ್ಲಿ ಪೊಲೀಸ್ ವಾಹನದ ಎದುರೇ ರೈತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲೇ ಇದ್ದರು.ಪ್ರತಿಭಟನೆಯಲ್ಲಿ ಕರಗುಪ್ಪಿ ಗ್ರಾಮದ ರೈತರಾದ ಶ್ರೀಕಾಂತ ಹಿರೇಮಠ, ಶಂಕರ ಪಾಟೀಲ, ಶಶಿಕಾಂತ ಪಾಟೀಲ, ಮಲಗೌಡ ರೆವನ್ನವರ, ಈರಪ್ಪ ಸನದಿ, ಗೌಡಪ್ಪ ಪಾಟೀಲ, ನಾಗರಾಜ ನಿರಲಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.